ಬೆಂಗಳೂರು, ಮಾ.15-ಇದೇ 23 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ 7 ಬಂಡಾಯ ಶಾಸಕರು ಮತ ಚಲಾಯಿಸದಂತೆ ತಡೆಯಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕಾನೂನು ಹೋರಾಟಕ್ಕೆ ಮುಂದಾಗಿದ್ದರೆ, ಅವರಿಗೆ ತಿರುಗೇಟು ನೀಡಲು ಬಂಡಾಯ ಶಾಸಕರೂ ಸಜ್ಜಾಗಿದ್ದಾರೆ.
ಕಳೆದ 2016ರಲ್ಲಿ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ಮಾಡಿದ ಶಾಸಕರಾದ ಎನ್.ಚಲುವರಾಯಸ್ವಾಮಿ, ಜಮೀರ್ ಅಹಮ್ಮದ್, ಅಖಂಡ ಶ್ರೀನಿವಾಸಮೂರ್ತಿ, ಎಚ್.ಸಿ.ಬಾಲಕೃಷ್ಣ, ರಮೇಶ್ಬಾಬು ಬಂಡಿಸಿದ್ದೇಗೌಡ, ಇಕ್ಬಾಲ್ ಅನ್ಸಾರಿ, ಭೀಮಾನಾಯಕ್ ಅವರ ವಿರುದ್ಧ ಕಾನೂನು ಹೋರಾಟಕ್ಕೆ ದೇವೇಗೌಡರು ಮುಂದಾಗಿದ್ದರೆ, ಅವರ ತಕರಾರು ಅರ್ಜಿಗೆ ತಡೆಯಾಜ್ಞೆ ತಂದು ತಿರುಗೇಟು ನೀಡಲು ಬಂಡಾಯ ಶಾಸಕರು ತಯಾರಾಗಿದ್ದಾರೆ.
ಪಕ್ಷದ ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಏಳು ಬಂಡಾಯ ಶಾಸಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸಭಾಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು. ಆದರೆ ಇದುವರೆಗೂ ಸಭಾಧ್ಯಕ್ಷರು ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಜೆಡಿಎಸ್ ಹೈಕೋರ್ಟ್ ಮೊರೆ ಹೋಗಲಿದೆ ಎಂದು ದೇವೇಗೌಡರು ತಿಳಿಸಿದ್ದಾರೆ.
ಸಭಾಧ್ಯಕ್ಷರು ಇದುವರೆಗೂ ಪಕ್ಷದ ವಿಪ್ ಉಲ್ಲಂಘಿಸಿದ ಶಾಸಕರ ವಿರುದ್ಧ ಕ್ರಮಕೈಗೊಳ್ಳದಿರುವುದರಿಂದ ಶಾಸಕಾಂಗದ ಕಾಯ್ದೆ ಪ್ರಕಾರ 7 ಜನ ಬಂಡಾಯ ಶಾಸಕರನ್ನು ಜೆಡಿಎಸ್ ಶಾಸಕರೆಂದೇ ಪರಿಗಣಿಸಲಾಗುತ್ತದೆ. ಚುನಾವಣೆಗೆ ಇನ್ನೂ ಎಂಟು ದಿನ ಬಾಕಿ ಇರುವಾಗ 7 ಮಂದಿ ಬಂಡಾಯ ಶಾಸಕರು ಮತ ಚಲಾಯಿಸದಂತೆ ಕಾನೂನು ಮೂಲಕ ತಂತ್ರಗಾರಿಕೆ ಹೂಡಲು ಹೊರಟಿರುವ ಜೆಡಿಎಸ್ ಮುಖಂಡರ ನಡೆ ಕುತೂಹಲ ಕೆರಳಿಸಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ತಡೆಯಲು ನ್ಯಾಯಾಲಯದ ಮೊರೆ ಹೋದರೆ ಯಾವ ರೀತಿ ಪ್ರತ್ಯುತ್ತರ ನೀಡಬೇಕೆಂಬುದು ನಮಗೂ ಗೊತ್ತಿದೆ ಎಂದು ಪಕ್ಷದ ಪ್ರಮುಖ ಮುಖಂಡರಲ್ಲೊಬ್ಬರಾಗಿದ್ದ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.
ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿಯಾಗಿರುವ ಫಾರೂಕ್ ಪಕ್ಷಕ್ಕಾಗಿ ಬಹಳ ವರ್ಷಗಳಿಂದ ದುಡಿದಿದ್ದಾರೆ. ಅಂಥವರನ್ನು ಗೆಲ್ಲಿಸಲೇಬೇಕು ಎಂದು ವ್ಯಂಗ್ಯವಾಡಿರುವ ಚಲುವರಾಯಸ್ವಾಮಿ, ನಮ್ಮ ವಿರುದ್ಧ ದೇವೇಗೌಡರ ಕಾನೂನು ಹೋರಾಟವನ್ನು ಸ್ವಾಗತಿಸುತ್ತೇವೆ.
ಜೆಡಿಎಸ್ನ ಬಂಡಾಯ ಶಾಸಕರು ಈಗಾಗಲೇ ಕಾಂಗ್ರೆಸ್ ಸೇರಲು ಸಜ್ಜಾಗಿದ್ದು, ರಾಜ್ಯಸಭಾ ಚುನಾವಣೆ ನಂತರ ಜೆಡಿಎಸ್ಗೆ ಗುಡ್ಬೈ ಹೇಳಿ ಅಧಿಕೃತವಾಗಿ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.