ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಪ್ರಣಾಳಿಕೆ ಬಿಡುಗಡೆ

 

ಬೆಂಗಳೂರು,ಮಾ.15- ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವು ತನ್ನ ಪ್ರಣಾಳಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿಂದು ಬಿಡುಗಡೆಗೊಳಿಸಿದರು.

ಈ ಕುರಿತು ಮಾತನಾಡಿದ ಪಕ್ಷದ ಅಧ್ಯಕ್ಷ ಮಹೇಶ್ ಗೌಡ, ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಶಿಕ್ಷಣ , ಕೃಷಿ, ಕೈಗಾರಿಕೆ, ಮಹಿಳಾ ಸಬಲೀಕರಣ, ಸರ್ವರಿಗೂ ಸಮಪಾಲು ಕುರಿತಂತೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ, ಹೋಬಳಿ ಮಟ್ಟದಲ್ಲಿ ಆದರ್ಶ ಶಾಲೆಗಳ ಸ್ಥಾಪನೆ, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಶಿಕ್ಷಣ , ಸ್ಪರ್ಧಾತ್ಮಕ ಸ್ಪರ್ಧೆಗಳಿಗೆ ಉಚಿತ ತರಬೇತಿ, ಉತ್ತಮ ಗ್ರಂಥಾಲಯ ಸ್ಥಾಪನೆ ಮಾಡಲಾಗುವುದು ಎಂದರು.

ಮಹಿಳೆಯರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುವುದು, ಪ್ರತಿ ಹಳ್ಳಿಗೆ ಸಂಚಾರಿ ಆಸ್ಪತ್ರೆ ಸೌಲಭ್ಯ , ಜಿಲ್ಲಾ ಮಟ್ಟದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿ 12 ಗಂಟೆ ನಿರಂತರ 3ಫೇಸ್ ವಿದ್ಯುತ್ ಪೂರೈಕೆ, ಎಲ್ಲ ಬ್ಯಾಂಕ್‍ಗಳಲ್ಲಿರುವ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದರು.

ಕೈಗಾರಿಕೆಗಳಲ್ಲಿ ಮಹಿಳೆಯರಿಗೆ ಶೇ.75ರಷ್ಟು ಉದ್ಯೋಗ ಮೀಸಲಾತಿ ಹಾಗೂ ರೈತರಿಗೆ ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಪ್ರತಿ 30 ಕಿ.ಮೀಗೆ ಆಧುನಿಕ ಸಂತೆ ಮಾರುಕಟ್ಟೆ ನಿರ್ಮಿಸುವುದು, ಆ ಸ್ಥಳದಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯ ಮತ್ತು ಸಾರಿಗೆ ಸೌಲಭ್ಯವನ್ನು ರೈತರಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ 24 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಅಭ್ಯರ್ಥಿಗಳಾದ ರವಿಕುಮಾರ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ