ಮಧುರೈ: ಮಾ-15:ತಮಿಳುನಾಡಿನ ಕುರಂಕಣಿ ಅರಣ್ಯದಲ್ಲಿ ಸಂಭವಿಸಿರುವ ಕಾಡ್ಗಿಚ್ಚಿಗೆ ಸಾವಿನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಪ್ರಕರಣ ಸಂಬಂಧ ಪ್ರವಾಸ ಆಯೋಜಕನನ್ನು ಬಂಧನಕ್ಕೊಳಪಡಿಸಲಾಗಿದೆ.
ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಸಮೀಪದ ಕಿತಾತುಕಡವು ಮೂಲದವರಾಗಿರುವ ದಿವ್ಯಾ ಎಂಬುವವರು ತಮ್ಮ ಪತಿ ವಿಬಿನ್ ಎಂಬುವವರನ್ನು ಕರೆದುಕೊಂಡು ಕುರಂಕಣಿ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆಂದು ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿ, ವಿಬಿನ್ ಅವರು ಸಾವನ್ನಪ್ಪಿದ್ದರು. ಕಾರ್ಯಾಚರಣಿಗಿಳಿದಿದ್ದ ರಕ್ಷಣಾ ಪಡೆಗಳು ವಿಬಿನ್ ಮೃತದೇಹವನ್ನು ಹೊರತೆಗೆದಿದ್ದು. ದಿವ್ಯಾ ಅವರಿಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿವೆ.
ಅಲ್ಲದೆ ದಿವ್ಯಾ ಅವರಿಗೆ ಹೃದಯ ಸ್ತಂಭನವುಂಟಾಗಿದ್ದು, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಕಳೆದ ರಾತ್ರಿ ದಿವ್ಯಾ ಅವರು ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಪ್ರಕರಣ ಸಂಬಂಧ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಪ್ರವಾಸಿ ಆಯೋಜಕನಾಗಿದ್ದ ಪ್ರಭು (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆಯೇ ಚಾರಣಕ್ಕೆ ಅವಕಾಶ ಮಾಡಿಕೊಟ್ಟ ಕಾರಣ ಪ್ರಭು ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.