ಬೆಂಗಳೂರು:ಮಾ-15: ಕಡಿಮೆ ಮೌಲ್ಯದ ಆಸ್ತಿಯನ್ನು ಅಡ ಇರಿಸಿ ರಾಷ್ಟ್ರೀಕೃತ ಬ್ಯಾಂಕ್ ಒಂದರಿಂದ ಭಾರಿ ಮೊತ್ತದ ಸಾಲ ಪಡೆದಿರುವ ಆರೋಪ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಕೇಳಿಬಂದಿದ್ದು, ಸಾಮಾಜಿಕ ಕಾರ್ಯಕರ್ತರೊಬ್ಬರು ಸಚಿವರ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.
ಕೇವಲ 1.10 ಕೋಟಿ ರು. ಮೌಲ್ಯದ ಜಮೀನನ್ನು ಅಡ ಇರಿಸಿರುವ ಸಚಿವರಿಗೆ ಸಿಂಡಿಕೇಟ್ ಬ್ಯಾಂಕ್‌ನ ಉಡುಪಿ ಜಿಲ್ಲೆಯ ಮಲ್ಪೆ ಶಾಖೆಯಿಂದ 193 ಕೋಟಿ ರು. ಸಾಲ ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾ ಆರೋಪಿಸಿದ್ದಾರೆ, ಕೂಡಲೇ ಈ ಕುರಿತು ತನಿಖೆ ನಡೆಸಬೇಕು ಎಂದು ದೂರು ನೀಡಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್‌ಗಳು ಯಾವುದೇ ಆಸ್ತಿಯ ಆಧಾರದ ಮೇಲೆ ಸಾಲ ನೀಡಲು ಪ್ರಮಾಣ ನಿಗದಿಪಡಿಸಲಾಗುತ್ತದೆ. ಆದರೆ, ಸಚಿವರಿಗೆ ಇಷ್ಟೊಂದು ಪ್ರಮಾಣದ ಸಾಲ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಒಂದೇ ಜಮೀನಿನ ದಾಖಲೆಗಳನ್ನು ಪ್ರಸ್ತುತಪಡಿಸಿ, ಹಲವು ಬಾರಿ ಸಾಲ ಪಡೆದುಕೊಳ್ಳಲಾಗಿದೆ. ಸಚಿವರಿಗೆ ಸಾಲ ಮಂಜೂರು ಮಾಡಿರುವುದರ ಹಿಂದೆ ಬ್ಯಾಂಕ್ ಮ್ಯಾನೇಜರ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆವ್ ನೀಡಿರುವ ಪ್ರಮೋದ್ ಮಧ್ವರಾಜ್, ಕಡಿಮೆ ಮೊತ್ತದ ಆಸ್ತಿ ಅಡ ಇರಿಸಿಕೊಂಡು ಭಾರಿ ಮೊತ್ತದ ಸಾಲ ನೀಡಲು ಬ್ಯಾಂಕ್‌ನವರಿಗೆ ತಲೆ ಕೆಟ್ಟಿಲ್ಲ. ಈ ರೀತಿ ಆರೋಪ ಮಾಡಿರುವವರಿಗೇ ತಲೆ ಕೆಟ್ಟಿದೆ ಎಂದು ಹೇಳಿದ್ದಾರೆ.
ನಮ್ಮ ತಂದೆಯ ಕಾಲದಿಂದಲೂ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ನಮ್ಮ ವ್ಯವಹಾರ ಇದೆ. ನಾನು ಸಾಲ ಪಡೆಯುವಾಗ ಎಷ್ಟು ಪ್ರಮಾಣದ ಆಸ್ತಿಯನ್ನು ಅಡ ಇರಿಸಬೇಕೋ ಅದಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಅಡ ಇಟ್ಟಿದ್ದೇನೆ. ನನ್ನ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ಆದರೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ, ಕೂಡಲೇ ಈ ಕುರಿತು ತನಿಖೆ ನಡೆಸಬೇಕು ಎಂದು ಕೋರಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ.