ಸಂಸತ್‍ನ ಉಭಯ ಸದನಗಳಲ್ಲೂ ಎಂಟನೆ ದಿನವಾದ ಇಂದು ಕೂಡ ಕಲಾಪಕ್ಕೆ ಅಡ್ಡಿ

ನವದೆಹಲಿ, ಮಾ.14- ಸಂಸತ್‍ನ ಉಭಯ ಸದನಗಳಲ್ಲೂ ಎಂಟನೆ ದಿನವಾದ ಇಂದು ಕೂಡ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಧರಣಿ ಮುಂದುವರಿಸಿ ಎಂದಿನಂತೆ ಕಲಾಪಕ್ಕೆ ಅಡ್ಡಿ ಉಂಟುಮಾಡಿದವು.
ಲೋಕಸಭೆಯಲ್ಲಿ ಸದಸ್ಯರುಗಳ ತೀವ್ರ ಪ್ರತಿಭಟನೆ ನಡುವೆ ಯಾವುದೇ ಚರ್ಚೆ ಇಲ್ಲದೆ ಪ್ರಸಕ್ತ ಹಣಕಾಸು ವರ್ಷದ ಬಜೆಟ್‍ಅನ್ನು ಅನುಮೋದಿಸಲಾಯಿತು.
ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಪ್ರತಿಭಟನೆ, ಏರಿದ ಧ್ವನಿಯ ಘೋಷಣೆಗಳ ನಡುವೆ ಹಣಕಾಸು ಸಚಿವ ಅರುಣ್ ಜೇಟ್ಲಿ ಹಣಕಾಸು ಮಸೂದೆ-2018 ಮಂಡಿಸಿದರು.
ಮುಂದುವರಿದ ಪ್ರತಿಭಟನೆ: ದೇಶದ ವಿವಿಧ ಭಾಗಗಳಲ್ಲಿ ಜನನಾಯಕರ ಪ್ರತಿಮೆಗಳ ಧ್ವಂಸ, ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಹಾಗೂ ಮತ್ತಿತರ ವಿಷಯಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ ಕಲಾಪ ಮುಂದೂಡಲಾಗಿದೆ. ಬಜೆಟ್ ಅಧಿವೇಶದ ಸತತ ಎಂಟನೆ ದಿನವೂ ವಿವಿಧ ವಿವಾದಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ. ಮಾ.5ರಿಂದಲೂ ಉಭಯ ಸದನಗಳಲ್ಲಿ ಯಾವುದೇ ಕಲಾಪ ನಡೆಯದೆ ಅದೇ ರಾಗ-ಅದೇ ಹಾಡು ಮುಂದುವರಿದಂತಾಗಿದೆ.
ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ಟಿಎಂಸಿ ಪಿಎನ್‍ಬಿ ಬ್ಯಾಂಕ್ ಹಗರಣ ವಿಷಯ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿತು. ಎನ್‍ಡಿಎ ಮಿತ್ರ ಪಕ್ಷ ಟಿಡಿಪಿ ಮತ್ತು ಟಿಆರ್‍ಎಸ್ ಸದಸ್ಯರು ಆಂಧ್ರಪ್ರದೇಶಕ್ಕಾಗಿ ವಿಶೇಷ ಪ್ಯಾಕೇಜ್‍ಗಾಗಿ ತನ್ನ ಬೇಡಿಕೆಯನ್ನು ಯಥಾ ಪ್ರಕಾರ ಮುಂದುವರಿಸಿದರು.  ಇದೇ ವೇಳೆ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಪಟ್ಟು ಹಿಡಿದು ಧರಣಿ ನಡೆಸಿದರು. ಕಳೆದ ಏಳು ದಿನಗಳಿಂದ ಕಲಾಪಕ್ಕೆ ಅಡ್ಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸುಮಿತ್ರ ಮಹಾಜನ್ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಮತ್ತೆ ಮತ್ತೆ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು.
ಆದರೆ, ಇದಕ್ಕೆ ಓಗೊಡದ ಪ್ರತಿಭಟನಾನಿರತ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿ ಧರಣಿ ನಡೆಸಿದರು. ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಗೊಳಿಸಲು ಯತ್ನಿಸಿ ವಿಫಲರಾದ ಸುಮಿತ್ರಾ ಮಹಾಜನ್ ಮಧ್ಯಾಹ್ನ 12 ಗಂಟೆಗೆ ಹಣಕಾಸು ಮಸೂದೆಗೆ ಅನುಮೋದನೆ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿ ಸದನ ಮುಂದೂಡಿದ್ದರು.
ಇದರೊಂದಿಗೆ ಸತತ ಎಂಟು ದಿನಗಳಿಂದ ಲೋಕಸಭೆ ಕಲಾಪಕ್ಕೆ ಅಡ್ಡಿಯಾಗಿದೆ.
ರಾಜ್ಯಸಭೆಯಲ್ಲೂ ಗದ್ದಲ: ಸಂಸತ್ತಿನ ಮುಂದುವರೆದ ಬಜೆಟ್ ಅಧಿವೇಶನದ ಎಂಟನೆ ದಿನವೂ ವಿವಿಧ ರಾಜ್ಯಗಳಲ್ಲಿ ಜನನಾಯಕರ ಪ್ರತಿಮೆ ಧ್ವಂಸ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ಹಗರಣ ಹಾಗೂ ಕಾವೇರಿ ಜಲವಿವಾದ ವಿಷಯಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ.
ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಎಂ.ವೆಂಕಯ್ಯನಾಯ್ಡು ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ ಹುತಾತ್ಮರಾದ ಸಿಆರ್‍ಪಿಎಫ್‍ನ 9 ಯೋಧರಿಗೆ ಶ್ರದ್ಧಾಂಜಲಿ ಸೂಚಕ ಮಂಡಿಸಿದರು. ಇದಾದ ನಂತರ ಕಾಂಗ್ರೆಸ್ ಮತ್ತು ಟಿಎಂಸಿ ಸದಸ್ಯರು ಪಿಎನ್‍ಬಿ ಹಗರಣ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಟಿಡಿಪಿ ಸದಸ್ಯರು ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಬಿಗಿಪಟ್ಟು ಮುಂದುವರಿಸಿದರು.
ಇದರಿಂದಾಗಿ ಸದನದಲ್ಲಿ ಭಾರೀ ಗದ್ದಲ-ಕೋಲಾಹಲ ನಿರ್ಮಾಣವಾಯಿತು.
ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಪಡಿಸಲು ಸಭಾಪತಿ ವೆಂಕಯ್ಯನಾಯ್ಡು ಪುನರಾವರ್ತಿತ ಮನವಿ ಮಾಡಿದರೂ ಪರಿಸ್ಥಿತಿ ತಿಳಿಗೊಳ್ಳಲಿಲ್ಲ. ಇದರಿಂದ ಬೇಸತ್ತ ನಾಯ್ಡು ಅವರು ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿದರು.
ಮತ್ತೆ ಕಲಾಪ ಸಮಾವೇಶಗೊಂಡಾಗ ಇದೇ ಪರಿಸ್ಥಿತಿ ಮುಂದುವರೆಯಿತು. ಟಿಎಂಸಿ, ಎಐಎಡಿಎಂಕೆ, ಡಿಎಂಕೆ ಮತ್ತು ಟಿಡಿಪಿ ಸದಸ್ಯರು ತಮ್ಮ ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಧರಣಿ ಮುಂದುವರೆಸಿದ್ದರಿಂದ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ