ತುಮಕೂರು, ಮಾ.14- ಹುಳಿಯಾರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 234ಕ್ಕೆ ಸಂಬಂಧಿಸಿದಂತೆ ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಒಂದೇ ರೀತಿಯ ಪರಿಹಾರ ಒದಗಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಆದೇಶ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶಿರಾದಿಂದ ಹುಳಿಯಾರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 234ಕ್ಕೆ ಭೂ ಸ್ವಾಧೀನ ಪಡಿಸಿಕೊಂಡಿರುವ ಭೂಮಿ ಮಾಲೀಕರಲ್ಲಿಯೇ ತಾರತಮ್ಯ ನಡೆಸಿ, ಒಬ್ಬರಿಗೆ ಒಂದೊಂದು ರೀತಿ ಪರಿಹಾರ ವಿತರಿಸುವುದನ್ನು ಖಂಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ರೈತರು,ರೈತಸಂಘದ ಮುಖಂಡರು,ರಾಷ್ಟ್ರೀಯ ಹೆದ್ದಾರಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಪರಿಹಾರ ನೀಡುವಲ್ಲಿ ತಾರತಮ್ಯ ವೆಸಗದೆ ಎಲ್ಲಾ ರೈತರಿಗೂ ಒಂದೇ ರೀತಿಯ ಪರಿಹಾರ ಒದಗಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿಗೆ ಬಲಿಯಾಗಿರುವ ಭೂಮಿಯಲ್ಲಿರುವ ಕೊಳವೆ ಬಾವಿ,ಮರಗಳನ್ನು ಸಹ ಪರಿಗಣಿಸಿ, ಅವುಗಳಿಗೆ ಸೂಕ್ತ ಪರಿಹಾರ ನೀಡಬೇಕು.ಈ ನಿಟ್ಟಿನಲ್ಲಿ ಸೂಕ್ತ ತನಿಖೆಗೆ ನಡೆಸಿ ಹೊಸ ನಿಯಮಗಳ ಅನ್ವಯ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಜಿಲ್ಲಾಡಳಿತ ಸಿದ್ದವಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಸಚಿವರಿಗೆ ಮತ್ತು ರೈತರಿಗೆ ಭರವಸೆ ನೀಡಿದರು.
ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿರುವ ಸುಮಾರು 27 ಜನ ರೈತರಿಗೂ ಸೂಕ್ತ ಪರಿಹಾರ ನೀಡುವಂತೆ ಸಭೆಯಲ್ಲಿ ರೈತ ಸಂಘದ ಮುಖಂಡರು ಒತ್ತಾಯಿಸಿದರು.
ಸಭೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್,ಮಹಿಳಾ ಘಟಕದ ಅಧ್ಯಕ್ಷ ಶಿವರತ್ನ,ಜಿಲ್ಲಾ ಕಾರ್ಯದರ್ಶಿ ಧನಂಜಯ ಆರಾಧ್ಯ,ಪಾತ್ರೆ ಸಿದೇಶ್,ರೈತರಾದ ಫಯಾಜ್,ರಾಂಗನಾಥ್,ಹೇಮಂತ್,ಮಂಜುನಾಥ್, ಕಲ್ಯಾಣಮ್ಮ ಮತ್ತಿತರರು ಉಪಸ್ಥಿತರಿದ್ದರು.