ಆರು ಜನ ದುಷ್ಕರ್ಮಿಗಳಿಂದ ಕ್ಲಿನಿಕ್ ಮಾಲೀಕರ ಮೇಲೆ ಹಲ್ಲೆ ಮತ್ತು ಅಪಹರಣ

ಬೆಂಗಳೂರು, ಮಾ.14-ಆರು ಜನ ದುಷ್ಕರ್ಮಿಗಳಿಂದ ಹಲ್ಲೆ ಮತ್ತು ಅಪಹರಣಕ್ಕೊಳಗಾಗಿದ್ದ ಕ್ಲಿನಿಕ್ ಮಾಲೀಕರೊಬ್ಬರು ಸಿನಿಮೀಯ ರೀತಿಯಲ್ಲಿ ಪಾರಾಗಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರು ರಸ್ತೆಯಲ್ಲಿ ಮದ್ಯವ್ಯಸನಿಗಳಿಗಾಗಿ ಪುನರ್ವಸತಿ ಕ್ಲಿನಿಕ್ ನಡೆಸುತ್ತಿದ್ದ ಬಿ.ವಿ.ಶೇಖರ್ (44) ಅವರನ್ನು ಕಳೆದ ವಾರ ಆರು ಮಂದಿ ದುಷ್ಕರ್ಮಿಗಳು ಹಲ್ಲೆ ನಡೆಸಿ ಕಾರಿನಲ್ಲಿ ಅಪಹರಿಸಿ 50 ಲಕ್ಷ ರೂ.ಗಳ ಒತ್ತೆ ಹಣಕ್ಕಾಗಿ ಪೀಡಿಸಿ ಆರು ಗಂಟೆಗಳ ಕಾಲ ನಗರದಲ್ಲಿ ಸುತ್ತಾಡಿಸಿದ್ದರು.

ದುಷ್ಕರ್ಮಿಗಳಿಂದ ದಾಳಿ ಮತ್ತು ಅಪಹರಣಕ್ಕೊಳಗಾದ ಶೇಖರ್ ತೀವ್ರ ಆತಂಕಕ್ಕೊಳಗಾಗಿದ್ದರು. ಆದರೆ ಆರೋಪಿಗಳ ಕಾರಿನ ಚಕ್ರ ಸಿಡಿದು ವಾಹನ ದಾರಿ ಮಧ್ಯೆ ನಿಂತುಹೋದ ಸಂದರ್ಭದಲ್ಲಿ ದುಷ್ಕರ್ಮಿಗಳು ವಾಹನದ ಚಕ್ರ ಬದಲಿಸುತ್ತಿದ್ದರು. ಈ ವೇಳೆ ಶೇಖರ್ ಸಮಯ ಸಾಧಿಸಿ ಕಾರಿನಿಂದ ಇಳಿದು ಆರೋಪಿಗಳಿಂದ ತಪ್ಪಿಸಿಕೊಂಡಿದ್ದಾರೆ.

ಮಾ.8ರ ರಾತ್ರಿ 11 ಗಂಟೆಗೆ ಶೇಖರ್ ಅವರು ದ್ವಿಚಕ್ರ ವಾಹನದಲ್ಲಿ ಪುಷ್ಪಾಂಜಲಿ ಪಾರ್ಕ್ ಸಮೀಪ ತೆರಳುತ್ತಿದ್ದಾಗ ಕಾರೊಂದು ಹಿಂದಿನಿಂದ ಅವರ ವಾಹನಕ್ಕೆ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಕಾರಿನಲ್ಲಿದ್ದ ಯುವಕರು ಶೇಖರ್ ಮೇಲೆ ಹಲ್ಲೆ ನಡೆಸಿ ಅವರನ್ನು ಕಾರಿನೊಳಗೆ ಎಳೆದೊಯ್ದಿದ್ದಾರೆ.
ನಂತರ ಶೇಖರ್ ಬಳಿಯಿದ್ದ ಮೊಬೈಲ್ ಸ್ವಿಚ್ ಆಫ್ ಮಾಡಿ ಕಾರಿನಲ್ಲೇ ಮತ್ತೊಮ್ಮೆ ಹಲ್ಲೆ ನಡೆಸಿ ಅವರ ಬಳಿಯಿದ್ದ 10 ಸಾವಿರ ನಗದು ಹಾಗೂ ಎರಡು ಎಟಿಎಂ ಕಾರ್ಡ್‍ಗಳನ್ನು ಕಿತ್ತುಕೊಂಡಿದ್ದಾರೆ.

ನಿನ್ನನ್ನು ಬಿಡುವುದಿಲ್ಲ. ನಗರದ ಹೊರವಲಯಕ್ಕೆ ಕರೆದೊಯ್ದು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ದುಷ್ಕರ್ಮಿಗಳು 50 ಲಕ್ಷ ರೂ. ಒತ್ತೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ನಾವು ಹೇಳುವ ಸ್ಥಳಕ್ಕೆ 50ಲಕ್ಷ ರೂ. ನೀಡುವಂತೆ ಒತ್ತಾಯಿಸಿದರು.

ಈ ರೀತಿ ಸುಮಾರು ಆರು ಗಂಟೆಗಳ ಕಾಲ ಕಾರಿನಲ್ಲೇ ಶೇಖರ್ ಅವರ್ನು ದುಷ್ಕರ್ಮಿಗಳು ಕರೆದೊಯ್ದರು. ಇದೇ ವೇಳೆ ಮುಂಜಾನೆ 5 ಗಂಟೆ ಸಮಯದಲ್ಲಿ ಅವರ ಕಾರಿನ ಚಕ್ರವೊಂದು ಸಿಡಿಯಿತು. ಕಾರನ್ನು ಪಕ್ಕಕ್ಕೆ ಇರಿಸಿ ದುಷ್ಕರ್ಮಿಗಳು ಚಕ್ರ ಬದಲಿಸುತ್ತಿದ್ದಾಗ ಸಮಯ ಸಾಧಿಸಿದ ಶೇಖರ್ ನಿರ್ಜನಪ್ರದೇಶದಿಂದ ತಪ್ಪಿಸಿಕೊಂಡರು ಬಹುದೂರ ಬಂದ ಅವರಿಗೆ ತಾವು ದಾಬಸ್‍ಪೇಟೆ-ದೊಡ್ಡಬಳ್ಳಾಪುರ ರಸ್ತೆಯಲ್ಲಿರುವುದು ತಿಳಿಯಿತು.

ನಂತರ ನಗರಕ್ಕೆ ವಾಪಸ್ಸಾದ ಅವರು ಗಿರಿನಗರ ಪೆÇಲೀಸ್ ಠಾಣೆಗೆ ದೂರು ನೀಡಿ ದುಷ್ಕರ್ಮಿಗಳ ಚಹರೆ ವಿವರವನ್ನು ತಿಳಿಸಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ