ಕೆಂಬ್ರಿಡ್ಜ್:ಮಾ-14: ಪ್ರಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ತಮ್ಮ ನಿವಾಸದಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಭೌತಶಾಸ್ತ್ರಜ್ಞರಾಗಿದ್ದ ಹಾಕಿಂಗ್ 40 ವರ್ಷಗಳ ಸುದೀರ್ಘ ಕಾಲ ಅನುಭವದ ಮೂಲಕ ಹಲವು ಪುಸ್ತಕಗಳು ಹಾಗೂ ಅಧ್ಯಯನ ಗ್ರಂಥಗಳನ್ನು ವಿಜ್ಞಾನ ಲೋಕಕ್ಕೆ ನೀಡುವ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಪಡೆದಿದ್ದರು.
ರಾಯಲ್ ಸೊಸೈಟಿ ಆಫ್ ಆರ್ಟ್ಸ್ನ ಗೌರವಾನ್ವಿತ ವ್ಯಕ್ತಿಯಾಗಿದ್ದ ಹಾಕಿಂಗ್ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ ಆಜೀವ ಸದಸ್ಯತ್ವ ಹೊಂದಿದ್ದರು.
ಅವರ ನಿಧನದ ವಾರ್ತೆಯನ್ನು ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್ ಅವರು ಮಾಧ್ಯಮಗಳಿಗೆ ತಿಳಿಸಿದ್ದು, ನಾವು ನಮ್ಮ ತಂದೆಯವರನ್ನು ಕಳೆದುಕೊಂಡು ತೀವ್ರ ದುಃಖೀತರಾಗಿದ್ದೇವೆ ಎಂದಿದ್ದಾರೆ.
ಅಪರೂಪದ ನರ ದೌರ್ಬಲ್ಯದ ‘ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್’ನ (ಅಥವಾ ALS) ವಿಧವಾದ ತೀವ್ರತರದ ಸ್ನಾಯುಚಾಲಕ ನರಕೋಶದ ಕಾಯಿಲೆಗೆ ತುತ್ತಾಗಿ ವಿಪರೀತ ಅಶಕ್ತತೆಗೆ ಸ್ಟೀಫನ್ ಗುರಿಯಾಗಿದ್ದರು. ಅವರ ಈ ಕಾಯಿಲೆಯನ್ನು ‘ಬೆನ್ನುಹುರಿಯ ಸ್ನಾಯು ಕ್ಷೀಣತೆಯ IVನೇ ವಿಧ’ ಎಂದೂ ಗುರುತಿಸಲಾಗಿದೆ.
ದಶಕಗಳ ಕಾಲ ಈ ಕಾಯಿಲೆಯಿಂದ ನರಳಿದ ಅವರು ಕ್ರಮೇಣ ಪಾರ್ಶ್ವವಾಯುವಿಗೆ ತುತ್ತಾದರು. ಹಾಕಿಂಗ್ ಅವರ 21 ವರ್ಷ ವಯಸ್ಸಿನಲ್ಲೇ (1963) ಈ ಕಾಯಿಲೆ ಇರುವುದು ಪತ್ತೆಯಾಗಿತ್ತು.
ಖ್ಯಾತ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದ ಅವರಿಗೆ 13 ಗೌರವ ಪದವಿಗಳು ದೊರೆತಿದ್ದವು. ಸಿಬಿಇ (1982), ಕಂಪ್ಯಾನಿಯನ್ ಆಫ್ ಆನರ್ (1989) ಮತ್ತು ಪ್ರಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ’ (2009) ಪ್ರಶಸ್ತಿಗಳು ಅವರಿಗೆ ದೊರೆತಿವೆ. ಅಲ್ಲದೆ, ಫಂಡಮೆಂಟಲ್ ಫಿಸಿಕ್ಸ್ ಪ್ರೈಜ್ (2013), ಕಾಪ್ಲೆ ಮೆಡಲ್ (2006) ಮತ್ತು ವೂಲ್ಫ್ ಫೌಂಡೇಶನ್ ಪ್ರೈಜ್ (1988) ಸೇರಿದಂತೆ ಇನ್ನೂ ಹಲವಾರು ಪದಕಗಳು, ಪಾರಿತೋಷಕಗಳನ್ನು ಅವರು ಪಡೆದಿದ್ದರು.
physicist-stephen-hawking,dies,aged 76