ದಾವಣಗೆರೆ, ಮಾ.14-ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನಗರದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿಯ ಅಧಿಕಾರದ ಅವಧಿಯಲ್ಲಿ ಮಾಡಲಾಗದ ಸಾಧನೆಗಳನ್ನು ನಾವು ಮಾಡಿದ್ದೇವೆ. ಇದೀಗ ಮತ್ತೆ ಅವಕಾಶ ಕೊಡಿ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ ಲೇವಡಿ ಮಾಡಿದರು.
ಶ್ರಮಿಕ ವರ್ಗದ ಜನರು ಹಸಿವಿನಿಂದ ಮಲಗಬಾರದು ಎಂದು ಎರಡು ಹೊತ್ತಿನ ಊಟ ಎಲ್ಲರಿಗೂ ಸಿಗುವಂತಹ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಬೇಕು. ಆ ಮೂಲಕ ಹಸಿವು ಮುಕ್ತ ರಾಜ್ಯ ಮಾಡಬೇಕು ಎಂಬುವ ನನ್ನ ಕನಸು ಅದನ್ನು ನನಸು ಮಾಡುವುದೇ ನನ್ನ ಉದ್ದೇಶ ಎಂದು ತಿಳಿಸಿದರು.
ಪ್ರಮಾಣ ವಚನ ಸ್ವೀಕರಿಸಿ ಅರ್ಧ ಗಂಟೆಯೊಳಗೆ ಹಸಿವು ಮುಕ್ತ ರಾಜ್ಯ ಮಾಡಬೇಕೆಂದು ಪ್ರತಿ ತಿಂಗಳು ಉಚಿತವಾಗಿ ಪ್ರತಿ ಕುಟುಂಬಕ್ಕೆ ಏಳು ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ದಾವಣಗೆರೆ ಉತ್ತರ ಹಾಗೂ ದಕ್ಷಿಣ ಅಭಿವೃದ್ಧಿ ಕ್ಷೇತ್ರಗಳಿಗೆ ಒಂದು ಸಾವಿರದ ನೂರು ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಕಳೆದ ಐದು ವರ್ಷದಲ್ಲಿ ದಾವಣಗೆರೆ ನಗರದ ಎರಡು ಕ್ಷೇತ್ರಗಳಿಗೆ 2ಸಾವಿರ ಕೋಟಿ ರೂ.ಗಳ ಹೆಚ್ಚಿನ ಅನುದಾನ ಬಂದಿದೆ.ಇಷ್ಟು ಅನುದಾನದಿಂದ ನಗರ ಅಭಿವೃದ್ಧಿಯಾಗುತ್ತಿದೆ ಎಂದರೆ ಅದಕ್ಕೆ ಶಾಸಕ ಶ್ಯಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೇ ಕಾರಣ ಎಂದು ಹೇಳಿದರು.
2013ರ ಬಸವ ಜಯಂತಿಯಂದು ನಾನು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದೆ. ಇಲ್ಲಿಗೆ 4 ವರ್ಷ 10 ತಿಂಗಳು ಆಯಿತು. ದೇವರಾಜ ಅರಸು ಅವರ ನಂತರ 5 ವರ್ಷಗಳ ಸಂಪೂರ್ಣ ಅಧಿಕಾರ ನಡೆಸಲು ಅವಕಾಶ ನನಗೆ ದೊರಕಿದೆ. ಇದು ನೀವು ಕೊಟ್ಟ ಅಧಿಕಾರ ಎಂದರು.
ಕ್ಷೀರಧಾರೆ ಯೋಜನೆ ಮೂಲಕ ಪ್ರತಿ ಲೀಟರ್ ಹಾಲಿಗೆ 5 ರೂ. ಸಹಾಯಧನ ಕೊಡಲಾಗಿದೆ. ಇದರಿಂದಾಗಿ ಸೊಸೈಟಿಗೆ 25 ಲಕ್ಷ ಲೀಟರ್ ಹಾಲು ಹೆಚ್ಚಾಗಿದೆ. ಕೃಷಿ ಹೊಂಡ ನಿರ್ಮಾಣ, ಬಡ್ಡಿ ರಹಿತ ಸಾಲ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ದಾವಣಗೆರೆ ಪಟ್ಟಣ ಸ್ಮಾರ್ಟ್ ಸಿಟಿಯಾಗಿದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯ ಹಣ ನಯಾಪೈಸೆ ಬಂದಿಲ್ಲ. ಆ ಹಣದಿಂದ ಇಟ್ಟಿಗೆ, ಮಣ್ಣು ಹಾಕಿಲ್ಲ. ಆದರೆ ಮುಖ್ಯಮಂತ್ರಿಯವರ ಸಹಕಾರ, ಪೆÇ್ರೀ ಶಾಶ್ವತ ಕಾಮಗಾರಿಗಳು ನಡೆಯುತ್ತಿದೆ ಎಂದು ಹೇಳಿದರು.
ಶಾಸಕರಾದ ಕೆ.ಶಿವಮೂರ್ತಿನಾಯಕ್,ಎಚ್.ಪಿ.ರಾಜೇಶ್, ಮೇಯರ್ ಲಲಿತಬಾಯಿ ಮಾಲತೇಶ್,ಉಪಮೇಯರ್ ನಾಗರತ್ನಮ್ಮ, ಜಿ.ಪಂ. ಸದಸ್ಯ ಬಸವಂತಪ್ಪ, ಡಾ.ವೈ.ನಾಗಪ್ಪ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಶಿವನಹಳ್ಳಿ ಮಹಾನಗರ ಪಾಲಿಕೆ ಸದಸ್ಯ ರಮೇಶ್, ಅಶ್ವಿನಿ ಪ್ರಶಾಂತ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಎಸ್.ಗುಳೇದ್ ಮತ್ತಿತರರು ಉಪಸ್ಥಿತರಿದ್ದರು.