ಹತ್ಯೆಯಾದ ಬಿಬಿಎಂಪಿ ಸದಸ್ಯ ನಟರಾಜ್ ಅವರ ಕುಟುಂಬ ಬೀದಿ ಪಾಲಾಗಿಲ್ಲ – ಕಾಂಗ್ರೆಸ್ ಸದಸ್ಯೆ ಲತಾ ಠಾಕೂರ್

ಬೆಂಗಳೂರು, ಮಾ.13-ಕೆಲ ವರ್ಷಗಳ ಹಿಂದೆ ಹತ್ಯೆಯಾದ ಬಿಬಿಎಂಪಿ ಸದಸ್ಯ ನಟರಾಜ್ ಅವರ ಕುಟುಂಬ ಬೀದಿ ಪಾಲಾಗಿಲ್ಲ. ಆದರೆ, ಬಿಜೆಪಿಯವರು ಕಥೆ ಕಟ್ಟುತ್ತಿದ್ದಾರೆ. ಅವರ ಮನೆಯವರು ಚೆನ್ನಾಗಿದ್ದಾರೆ. ಪಾಲಿಕೆ ಸದಸ್ಯರ ಒಂದು ತಿಂಗಳ ವೇತನಕೊಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಸದಸ್ಯೆ ಲತಾ ಠಾಕೂರ್ ಪಾಲಿಕೆ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಲತಾ, ಕಳೆದ ಸಭೆಯಲ್ಲಿ ಬಿಜೆಪಿಯ ಉಮಾಶಶೆಟ್ಟಿಯವರು ಇತ್ತೀಚೆಗೆ ಹತ್ಯೆಯಾದ ನಟರಾಜ್ ಕುಟುಂಬ ಬೀದಿಪಾಲಾಗಿದೆ. ಬೀದಿ ಬದಿ ವ್ಯಾಪಾರ ಮಾಡಿ ಬದುಕುತ್ತಿದ್ದಾರೆ. ಪಾಲಿಕೆಯಿಂದ ಸಹಾಯ ಕೊಡಬೇಕು ಎಂದು ಆಗ್ರಹಿಸಿದ್ದರು. ಅದರಂತೆ ಸದಸ್ಯರೆಲ್ಲ ಒಂದು ತಿಂಗಳ ವೇತನ ನೀಡಲು ತೀರ್ಮಾನಿಸಿದ್ದಾರೆ. ನಟರಾಜ್ ಪತ್ನಿಯೇ ಸ್ವತಃ ನನಗೆ ಪತ್ರ ಕೊಟ್ಟಿದ್ದಾರೆ. ಗಾಂಧಿನಗರ ಶಾಸಕ ದಿನೇಶ್‍ಗುಂಡೂರಾವ್ ಅವರು ನಮಗೆ ಆಸರೆ ನೀಡಿದ್ದಾರೆ. ಕೆಲವರ ಆರೋಪದಂತೆ ನಾವು ಬೀದಿಪಾಲಾಗಿಲ್ಲ. ಸದಸ್ಯರು ಒಂದು ತಿಂಗಳ ವೇತನ ಕೊಡುವ ಅಗತ್ಯವಿಲ್ಲ ಎಂದು ಬರೆದಿದ್ದಾರೆ. ಆದರೆ, ಬಿಜೆಪಿಯವರು ನಟರಾಜ್ ಕುಟುಂಬದವರು ಅನಾಥರಾಗಿದ್ದಾರೆ ಎಂದು ಹೇಳಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಮಹೇಶ್‍ಬಾಬು ಅಪಘಾತದಲ್ಲಿ ಮೃತಪಟ್ಟಾಗ, ಅದೇ ರೀತಿ ಕೆಲವರು ಅಕಾಲಿಕ ಮರಣಹೊಂದಿದಾಗ ಪಕ್ಷಾತೀತವಾಗಿ ನಾವೆಲ್ಲ ಸಹಾಯ ಮಾಡಿದ್ದೇವೆ. ನಟರಾಜ್ ಅವರ ಮಾವ ನಮಗೆ ಕಷ್ಟವಿರುವುದರಿಂದ ಸಹಾಯ ಬೇಕೆಂದು ಅಲವತ್ತುಕೊಂಡಿದ್ದರು. ಹಾಗಾಗಿ ಸಹಾಯ ಮಾಡಲು ಮುಂದಾದೆವು. ಅವರಿಗೆ ಸಹಾಯ ಬೇಡ ಎಂದಾದರೆ ಬೇಡ ಬಿಡಿ ಎಂದು ಬಿಜೆಪಿ ಸದಸ್ಯರು ಲತಾ ಠಾಕೂರ್ ಅವರಿಗೆ ತಿರುಗೇಟು ನೀಡಿದರು.
ಈ ವೇಳೆ ಮೇಯರ್ ಸಂಪತ್‍ರಾಜ್ ಮಧ್ಯಪ್ರವೇಶಿಸಿ, ಸಾವಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ನಾನು, ಉಪಮೇಯರ್ ಪದ್ಮಾವತಿನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರೊಂದಿಗೆ ನಟರಾಜ್ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ವಾದ-ವಿವಾದಗಳಿಗೆ ತೆರೆ ಎಳೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ