![dkshivakumar](http://kannada.vartamitra.com/wp-content/uploads/2018/02/dkshivakumar-678x381.jpg)
ರಾಮನಗರ, ಮಾ.13- ಕಾವೇರಿ ನದಿಯಿಂದ ಕನಕಪುರ ತಾಲ್ಲೂಕಿನ 27 ಕೆರೆಗಳಿಗೆ 150 ಕೋಟಿ ರೂ. ವೆಚ್ಚದಲ್ಲಿ ನೀರನ್ನು ತುಂಬಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅವರು ಸಾತನೂರು ಹೋಬಳಿಯ ಕಂಚನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ, ಜಲಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರ ಬದುಕನ್ನು ಹಸನು ಮಾಡಲು ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದ ಅವರು, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಕಾವೇರಿ ನೀರಾವರಿ ನಿಗಮದ ಹಿರಿಯ ಹಾಗೂ ಕಿರಿಯ ಅಧಿಕಾರಿಗಳನ್ನು ಅಭಿನಂದಿಸಿದರು. 155 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿಸಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಿ, 29 ಕರೆಗಳನ್ನು ತುಂಬಿಸಲಾಗಿದೆ. ಹೆಗ್ಗನೂರು ಸುತ್ತಮುತ್ತಲ ಸುಮಾರು 250 ಎಕರೆಯಲ್ಲಿ ಹನಿ ನೀರಾವರಿ ಯೋಜನೆಗೆ ಹಂತ ಹಂತವಾಗಿ ಚಾಲನೆ ನೀಡಲಾಗುತ್ತಿದೆ. ಹಾರೋಹಳ್ಳಿ ಹಾಗೂ ಬೈರಮಂಗಲ ಕೆರೆಯನ್ನು ಶುದ್ಧ ಮಾಡಿ ಅದನ್ನು ಪಂಪ್ ಮಾಡಿ ನೀರು ತುಂಬಿಸುವಂತೆ ಮಂಜೂರು ಮಾಡಲಾಗಿದೆ. ಮೇಕೆದಾಟು, ಸಂಗಮದಿಂದ 216 ಕೆರೆಗಳಿಗೆ ಸುಮಾರು 250 ಕೋಟಿ ರೂ.ವೆಚ್ಚ ಮಾಡಿ ಕೆರೆಗಳನ್ನು ತುಂಬಿಸುವ ಯೋಜನೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಮಾತನಾಡಿದರು. ಜಿಪಂ, ತಾಪಂ ಸದಸ್ಯರು, ಸ್ಥಳೀಯ ಗ್ರಾಪಂ ಸದಸ್ಯರು, ಸಂಬಂಧಿಸಿದ ಅಧಿಕಾರಿಗಳು ಹಾಗೂ
ಮುಖಂಡರು ಉಪಸ್ಥಿತರಿದ್ದರು.