ಹಾವೇರಿ: ಕಾಂಗ್ರೆಸ್ ಪಕ್ಷದ ನಾಲ್ಕು ವರ್ಷ, 10ತಿಂಗಳ ಅವಧಿಯಲ್ಲಿ ನುಡಿದಂತೆ ನಡೆದಿದ್ದೇವೆ. ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಕೂಲಿಕೆಲಸವನ್ನು ಮಾಡಿದ್ದೇವೆ, ನಮ್ಮ ಪಕ್ಷಕ್ಕೆ ಕೂಲಿಕೊಡುವ ಮೂಲಕ ನವಕರ್ನಾಟಕ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನತೆಯನ್ನು ಕೇಳಿಕೊಂಡರು.
ಮಾ.13ರಂದು ಮಂಗಳವಾರ ರಾಣೇಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ನೀರಾವರಿ ನಿಗದ ಆಶ್ರಯದಲ್ಲಿ ಅಸುಂಡಿ ಗ್ರಾಮದಲ್ಲಿ ಆಯೋಜಿಸಿದ ಹಾವೇರಿ ಜಿಲ್ಲೆಯ ಬ್ಯಾಡಗಿ, ಹಿರೇಕೆರೂರು, ರಾಣೇಬೆನ್ನೂರ ತಾಲೂಕಿನಡಿಯಲ್ಲಿ ಬರುವ ಅಸುಂಡಿ ಮತ್ತು ಇತರ 18 ಕೆರೆಗಳಿಗೆ ಏತ ನೀರಾವರಿ ಮೂಲಕ ರಾಣೇಬೆನ್ನೂರ ತಾಲೂಕಿನ ಕೋಟೆಹಾಳ ಗ್ರಾಮದ ಹತ್ತಿರ ತುಂಗಾಭದ್ರಾ ನದಿಯಿಂದ ನೀರು ಎತ್ತಿ ಕೆರೆಗಳಿಗೆ ತುಂಬಿಸುವ ಯೋಜನೆ ಹಾಗೂ ಕ್ಷೇತ್ರದ ವಿವಿಧ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
, ನಾವು ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾತ್ರ ಜನರಬಳಿ ಹೇಳುತ್ತೀದ್ದೇವೆ. ಒಂದೇ ಒಂದು ಸುಳ್ಳು ನುಡಿಯುತ್ತಿಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಮೈತ್ರಿ-ಮನಸ್ವಿನಿ, ವಿದ್ಯಾಸಿರಿ, ಕೃಷಿಸಾಲ ಮನ್ನಾ, ಅನಿಲಭಾಗ್ಯ, ಪಶುಭಾಗ್ಯ, ಇಂದಿರಾಕ್ಯಾಂಟಿನ್ನಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇವೆಲ್ಲ ಸುಳ್ಳಾ? ಎಂದು ಜನರಿಗೆ ಪ್ರಶ್ನೆಯ ಮಾದರಿಯಲ್ಲಿ ಕೇಳುತ್ತಲೇ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ನೀಡಿದ ಮುಖ್ಯಮಂತ್ರಿಗಳು ಗೇಯುವ ಎತ್ತಿಗೆ ಮೇವು ಹಾಕಿ, ಕಳ್ಳ ಎತ್ತುಗಳಿಗೆ ಹುಲ್ಲು ಹಾಕಬೇಡಿ, ಹಾಗೇನೆ ಕೆಲಸಮಾಡಿದವರನ್ನು ಆಶೀರ್ವದಿಸಿ ,ಕಳ್ಳರಿಗೆ ಹೋಟುಹಾಕಬೇಡಿ ಎಂದರು.
ನವ ಕರ್ನಾಟಕ ನಿರ್ಮಾಣ ಮಾಡಲು ಕರ್ನಾಟಕ ವಿಜನ್-2025 ರೂಪಿಸಿದ್ದೇವೆ, ಕರ್ನಾಟಕವನ್ನು ನವ ಕರ್ನಾಟಕವನ್ನಾಗಿ ನಿರ್ಮಾಣ ಮಾಡಲು, ಇಡಿ ದೇಶದಲ್ಲಿ ಕರ್ನಾಟಕ ರಾಜ್ಯವನ್ನು ಮೊದಲನೆಯ ಸ್ಥಾನದಲ್ಲಿ ತರಲು ಮತ್ತೊಮ್ಮೆ ನಮ್ಮನ್ನು ಆಶೀರ್ವದಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ರಾಜ್ಯದ 1.43 ಕೋಟಿ ಕುಟುಂಬಗಳ ಪೈಕಿ 1.20 ಕೋಟಿ ಬಿ.ಪಿ.ಎಲ್. ಕುಟುಂಬಗಳಿವೆ. ಈ ಬಿ.ಪಿ.ಎಲ್. ಕುಟುಂಬಗಳಿಗೆ ಹೊಸದಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ವಿಲ್ಲದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುವ ಬಡ ಕುಟುಂಬಗಳ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇನ್ನು ಮುಂದೆ ಚಿಕಿತ್ಸೆಗೆ ದಾಖಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮರಣಹೊಂದಿದ ವ್ಯಕ್ತಿಯ ಹೆಣವನ್ನು ಹಣವಿಲ್ಲದೆ ಕೊಡುವುದಿಲ್ಲ ಎಂದು ಹೇಳುವಂತಿಲ್ಲ. ಒಂದೊಮ್ಮೆ ಹಣವಿಲ್ಲದೆ ಮರಣಹೊಂದಿದ ವ್ಯಕ್ತಿಯ ಶವವನ್ನು ನೀಡುವುದಿಲ್ಲ ಎಂದು ಹೇಳುವ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಕೆರೆ ತುಂಬುವುದು ನಮ್ಮ ಮೊದಲ ಆದ್ಯತೆ, ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆಗೆ ಸೇರಿದ 36 ಸಾವಿರ ಕೆರೆಗಳು ರಾಜ್ಯದಲ್ಲಿವೆ. ಈ ಪೈಕಿ 80-90ರಷ್ಟು ಕೆರೆಗಳು ಒಣಗಿಹೋಗಿವೆ. ಈ ಎಲ್ಲ ಕೆರೆಗಳಿಗೆ ನೀರು ತುಂಬಿದರೆ ರಾಜ್ಯವನ್ನು ಬರಮುಕ್ತ ಕರ್ನಾಟಕ ರಾಜ್ಯವಾಗಿ ರೂಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಕೆರೆ ತುಂಬಿಸುವ ಕಾರ್ಯಕ್ರಮವನ್ನು ಆದ್ಯತೆಯ ಕಾರ್ಯಕ್ರಮವಾಗಿ ನಮ್ಮ ಕೈಗೊಂಡಿದೆ ಎಂದು ಹೇಳಿದರು.
ಬ್ಯಾಡಗಿ ಕ್ಷೇತ್ರದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಬ್ಯಾಡಗಿ ಕ್ಷೇತ್ರವೊಂದರಲ್ಲೇ ಎರಡುಸಾವಿರ ಕೋಟಿ ರೂ.ಗಳ ಕಾಮಗಾರಿ ನಡೆದಿವೆ. ಅಸುಂಡಿ ಕೆರೆ ಸೇರಿದಂತೆ ರಾಣೇಬೆನ್ನೂರು, ಹಿರೇಕೆರೂರು, ಬ್ಯಾಡಗಿ, ವ್ಯಾಪ್ತಿಯ 18 ಕೆರೆಗಳನ್ನು ತುಂಬುವ ಈ ಯೋಜನೆಯಿಂದ ಕುಡಿಯುವ ನೀರಿನ ತೊಂದರೆ, ಅಂತರ್ಜಲ ಹೆಚ್ಚಳವಾಗಲಿವೆ, ಜಲಸಿರಿ ವೃದ್ಧಿಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರಪ್ಪ ಲಮಾಣಿ ಅವರು ಮಾತನಾಡಿ, ಜಿಲ್ಲೆಯಲ್ಲಿ 297 ಕೆರೆಗಳನ್ನು ತುಂಬಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಮಾನ್ಯ ಮುಖ್ಯಮಂತ್ರಿಗಳು ಜನರ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈಗಾಗಲೇ ಘೋಷಣೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜ್ ಆರಂಭಗೊಳಿಸುವುದಾಗಿ ಹೇಳಿದರು.
ಕರ್ನಾಟಕ ವಿಧಾನಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಧೀಮಂತ ನಾಯಕ. ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಮಾದರಿಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಾಮಾಜಿಕ ನ್ಯಾಯ ಧೋರಣೆಯನ್ನು ಮೆರೆದಿದ್ದಾರೆ. ಇವರ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಸಚಿವರಾದ ಎಚ್.ಕೆ.ಪಾಟೀಲ ಮಾತನಾಡಿ, ನಮ್ಮ ಸರ್ಕಾರ ಅಗತ್ಯಬಿದ್ದವರಿಗೆ, ಅರ್ಹರಿಗೆ ಹಸಿವು ಇಂಗಿಸುವಂತಹ, ಜನರಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸುವ ಕಾರ್ಯವನ್ನು ಮಾಡಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಅನಿಲಭಾಗ್ಯ, ಸಾಲಮನ್ನಾ ಸೇರಿದಂತೆ ನೂರಾರು ಕಾರ್ಯಕ್ರಮಗಳು ಇದಕ್ಕೆ ಸಾಕ್ಷಿಯಾಗಿವೆ. ಜನರು ಸ್ವಾವಲಂಬಿ ಬದುಕಬೇಕೆಂಬ ನಿಟ್ಟಿನಲ್ಲಿ ಬಡಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಜಲಸಿರಿಯನ್ನು ವೃದ್ಧಿಗೊಳಿಸಲು ಕೆರೆ ತುಂಬುವ ಯೋಜನೆಯಂತಹ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಅತ್ಯಂತ ಭೀಕರ ಪರಿಸ್ಥಿತಿ ಎದುರಿಸುತ್ತಿರುವ ಬ್ಯಾಡಗಿ, ರಾಣೇಬೆನ್ನೂರು, ಹಿರೇಕೆರೂರ ಭಾಗದ ಅಸುಂಡಿ ಸೇರಿದಂತೆ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳು ಮಂಜೂರಾತಿ ನೀಡಿದ್ದಾರೆ. ಆನೂರು, ಸುಣಲ್ಲಬಿದರಿ ಭಾಗದ ಗ್ರಾಮಗಳು ಭೀಕರ ಬರ ಎದುರಿಸುತ್ತಿರುವ ಗ್ರಾಮಗಳಾಗಿವೆ. ಈ ಗ್ರಾಮಗಳಿಗೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ನೀಡಬೇಕು. ಆನೂರು , ಹಿರೇನಂದಿಹಳ್ಳಿ ಇತರ ಕೆರೆಗಳನ್ನು ಎರಡನೆಯ ಹಂತದಲ್ಲಿ ತುಂಬಿಸುವುದು ಹಾಗೂ ಕಲ್ಲೇದೇವರ, ಬುಡಪನಹಳ್ಳಿ ಇತರ ಕೆರೆ ತುಂಬಿಸಲು ಮಂಜೂರಾತಿ ನೀಡಬೇಕೆಂದು ಮನವಿಮಾಡಿಕೊಂಡರು.
ಸಮಾರಂಭದಲ್ಲಿ ಶಾಸಕರಾದ ಮನೋಹರ ತಹಶೀಲ್ದಾರ, ಜಿ.ಪಂ.ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ,ಮಾಜಿ ಶಾಸಕ ಬಿ.ಸಿ.ಪಾಟೀಲ, ಜಿಲ್ಲಾಕಾಂಗ್ರೆಸ್ ಮಾಜಿ ಅಧ್ಯಕ್ಷ ಸೈಯದ್ ಅಜ್ಜಫೀರ ಖಾದ್ರಿ , ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿದಂತೆ ವಿವಿಧ ಜನಪ್ರತಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸ್ವಾಗತಿಸಿದರು. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ನಾಗ್ ವಂದಿಸಿದರು.
ಸಾಮಾಜಿಕ ನ್ಯಾಯದಿಂದ ನನಗೆ ಅನ್ಯಾಯವಾಗಿದೆ
ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಸಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ, ಅರಸು ಅವರ ನಂತರ ರಾಜ್ಯದಲ್ಲಿ ಅನೇಕ ಮುಖ್ಯಮಂತ್ರಿಗಳು ಆಗಿಹೋಗಿದ್ದಾರೆ. ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಈಹಿಂದಿನ ಯಾವ ಮುಖ್ಯಮಂತ್ರಿಗಳ ಕಾಲದಲ್ಲಿ ಆಗಿರದಷ್ಟು ಅಭಿವೃದ್ಧಿ ಕಾರ್ಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಾಗಿವೆ. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದಡಿ ಕಾರ್ಯಮಾಡುತ್ತಿದ್ದಾರೆ. ಅವರ ಸಾಮಾಜಿಕ ನ್ಯಾಯದಿಂದ ನನಗೆ ಅನ್ಯಾಯವಾಗಿದೆ., ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನಗಳನ್ನು ಹಂಚಿಕೆಮಾಡಿದ್ದರಿಂದ ನನಗೆ ಸಚಿವ ಸ್ಥಾನ ಸಿಗಲಿಲ್ಲ. ಆದರೆ ವಿಧಾನಸಭಾಧ್ಯಕ್ಷ ಸ್ಥಾನವು ನನಗೆ ಸಿಕ್ಕಿದ್ದು, ಮುಖ್ಯಮಂತ್ರಿಗಳ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ಕೆಲಸಮಾಡುತ್ತಿದ್ದಾರೆ, ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿ . ಕೆ.ಬಿ.ಕೋಳಿವಾಡ, ವಿಧಾನಸಭಾಧ್ಯಕ್ಷರು.
ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ
ಪ್ರಧಾನಂತ್ರಿ ನರೇಂದ್ರ ಮೋದಿಯವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಶಾ ಅವರು ಈಗಾಗಲೇ ರಾಜ್ಯಕ್ಕೆ 5ಬಾರಿ ಭೇಟಿ ನೀಡಿದ್ದಾರೆ, ಅವರು ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಅದು ತಮ್ಮ ಪಕ್ಕದಲ್ಲಿ ಭ್ರಷ್ಟಾಚಾರದ ಆರೋಪದಡಿ ಜೇಲಿಗೆ ಹೋಗಿ ಬಂದವರನ್ನು ಅಕ್ಕ-ಪಕ್ಕದಲ್ಲಿ ಕೂಡ್ರಿಸಿಕೊಂಡು ಈಆರೋಪಮಾಡುತ್ತಾರೆ, ಕರ್ನಾಟಕವನ್ನು ಹಸಿವು ಮುಕ್ತರಾಜ್ಯವನ್ನಾಗಿ ಮಾಡಲು ತಾವು ಜಾರಿಗೆ ತಂದಿರುವ ಅನ್ಯಭಾಗ್ಯ ಯೋಜನೆ ಕೇಂದ್ರದ ಯೋಜನೆ ಎಂದು ಹೇಳುತ್ತಾರೆ. ಹಾಗಾದರೇ ಮಾಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಅಲ್ಲೇಕೆ ಅನ್ಯಭಾಗ್ಯ ಯೋಜನೆ ಜಾರಿಗೆ ತಂದಿಲ್ಲ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ದ, ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು.