ಬೆಂಗಳೂರು, ಮಾ.13- ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದಲೂ ಆಡಳಿತ ನಡೆಸಿದ ಯಾವುದೇ ಪಕ್ಷ ನಿರಂತರವಾಗಿ ಅಧಿಕಾರದಲ್ಲಿ ಮುಂದುವರೆದಿಲ್ಲ. ಆಯಾ ಸರ್ಕಾರದ ಆಡಳಿತಾವಧಿ ಮುಗಿದ ನಂತರ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ರಾಜ್ಯದ ಮತದಾರರು ಆಡಳಿತದ ವಿರುದ್ಧವಾಗಿ ಮತ ಚಲಾಯಿಸಿರುವ ನಿದರ್ಶನಗಳಿವೆ.
ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ನಂತರ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಕೀರ್ತಿಗೆ ಸಿದ್ದರಾಮಯ್ಯ ಭಾಜನರಾಗಿದ್ದಾರೆ.
ಅದೇ ರೀತಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೊಂದು ದಾಖಲೆಯನ್ನು ನಿರ್ಮಿಸಲಿದ್ದಾರೆಯೇ ಎಂಬ ಚರ್ಚೆ ಮಾತ್ರ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ರಾಜ್ಯದ ಆಡಳಿತದ ಇತಿಹಾಸವನ್ನು ಅವಲೋಕಿಸಿದರೆ 1985ರ ನಂತರ ಯಾವುದೇ ರಾಜಕೀಯ ಪಕ್ಷ ಎರಡು ಅವಧಿಯ ಆಡಳಿತ ನಡೆಸಿರುವ ನಿದರ್ಶನಗಳಿಲ್ಲ. ಪ್ರತಿ ವಿಧಾನಸಭೆ ಚುನಾವಣೆಯಲ್ಲೂ ಹಿಂದಿನ ಆಡಳಿತ ವಿರೋಧಿಯಾದ ಜನಾದೇಶವೇ ಹೊರ ಬಿದ್ದಿದೆ.
ಮೊದಲ ಬಾರಿಗೆ 1983ರಲ್ಲಿ ಕಾಂಗ್ರೆಸೇತರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಅಲ್ಲಿಯವರೆಗೂ ಕಾಂಗ್ರೆಸ್ ಪಕ್ಷ ನಿರಂತರವಾಗಿ ಅಧಿಕಾರದಲ್ಲಿ
ಮುಂದುವರೆದಿತ್ತು. 1983ರಲ್ಲಿ ಅಧಿಕಾರದಲಿದ್ದ ಜನತಾ ಪಕ್ಷ ಹೊಂದಿದ್ದ ಶಾಸಕರ ಸಂಖ್ಯೆ 95. ನಂತರ 1985ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 139 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆಯನ್ನು ಹಿಡಿಯಿತು. ಆ ನಂತರ ರಾಷ್ಟ್ರೀಯ ಪಕ್ಷಗಳಾಗಲಿ, ಪ್ರಾದೇಶಿಕ ಪಕ್ಷಗಳಾಗಲಿ ಜನರ ವಿಶ್ವಾಸಗಳಿಸಿ ನಿರಂತರವಾಗಿ ಅಧಿಕಾರ ಮುಂದುವರೆಸುವಲ್ಲಿ ಯಶಸ್ವಿಯಾಗಿಲ್ಲ.
1983ರಿಂದ 1988ರವರೆಗೆ ರಾಮಕೃಷ್ಣ ಹೆಗಡೆ ಅವರೇ ನಿರಂತರವಾಗಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಜನತಾ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಹೆಗಡೆ ಅವರು ಅಧಿಕಾರ ಕಳೆದುಕೊಂಡು ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದರೂ ಅಲ್ಪಾವಧಿಯಲ್ಲೇ ಸರ್ಕಾರ ಪತನವಾಯಿತು.
1989ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಜನತಾ ಪಕ್ಷ ಅಧಿಕಾರ ಕಳೆದುಕೊಂಡು ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಫಲವಾಯಿತು. ಚುನಾವಣೆಗೂ ಮುನ್ನ ಜನತಾ ಪಕ್ಷ ಆಂತರಿಕ ಕಚ್ಚಾಟಕ್ಕೆ ತುತ್ತಾಗಿ ಜನತಾದಳ ಉದಯವಾಯಿತು. ಜನತಾದಳ ಕೇವಲ 24 ಕ್ಷೇತ್ರಗಳಲ್ಲಿ ಜಯಗಳಿಸಲು ಸಾಧ್ಯವಾಯಿತು. ಆದರೆ, ಸುಮಾರು ಒಂದು ದಶಕಗಳ ಕಾಲ ಅಧಿಕಾರದಿಂದ ದೂರ ಉಳಿದಿದ್ದ ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತ ಗಳಿಸಿತ್ತು.
1989ರಿಂದ 1994ರ ಐದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ನಿಂದ ವೀರೇಂದ್ರಪಾಟೀಲ್, ಎಸ್.ಬಂಗಾರಪ್ಪ ಹಾಗೂ ಎಂ.ವೀರಪ್ಪಮೊಯ್ಲಿ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಜನತಾ ದಳದ ನಾಯಕರು ಒಗ್ಗೂಡಿ ಚುನಾವಣೆಯನ್ನು ಎದುರಿಸಿದ ಫಲವಾಗಿ ಆಡಳಿತಾರೂಢ ಕಾಂಗ್ರೆಸ್ ಭಾರೀ ಸೋಲುಂಡಿತು. ಜನತಾದಳ ಸರಳ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿತು.
ಆಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ನಂತರ ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಈ ಅವಧಿಯಲ್ಲೂ ಮತ್ತೆ ಜನತಾದಳದ ಆಂತರಿಕ ಭಿನ್ನಮತ ಸ್ಪೋಟಗೊಂಡು ಎರಡು ಹೋಳಾಯಿತು.
ದೇವೇಗೌಡರು ಜೆಡಿಎಸ್ ಪಕ್ಷದ ನೇತಾರರಾದರೆ, ಜೆ.ಎಚ್.ಪಟೇಲ್ ಹಾಗೂ ರಾಮಕೃಷ್ಣ ಹೆಗಡೆ ಅವರು ಜೆಡಿಯು ಪಕ್ಷವನ್ನು ಅವಲಂಭಿಸಿದರು. ಇದರ ಪರಿಣಾಮ 1999ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತಗಳಿಸಿ ಅಧಿಕಾರಕ್ಕೆ ಬಂದಿತು.
ಎರಡೂ ಜನತಾದಳಗಳು ಸೋತವು. ಜೆಡಿಎಸ್ 10 ಕ್ಷೇತ್ರದಲ್ಲಿ ಜಯಗಳಿಸಿದರೆ, ಜೆಡಿಯು 18 ಕ್ಷೇತ್ರಗಳಲ್ಲಿ ಜಯಗಳಿಸಿತು. ಎಸ್.ಎಂ.ಕೃಷ್ಣ ಅವರು ಈ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು. ಆದರೆ, ಐದು ವರ್ಷ ಪೂರ್ಣಗೊಳಿಸದೆ ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ಎದುರಿಸಿದರು.
2004ರಲ್ಲಿ ನಡೆದ ಚುನಾವಣೆಯಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸೋಲುಂಡು ಅಧಿಕಾರ ಕಳೆದುಕೊಂಡಿತು. ಆಗ ಗೆದ್ದಿದ್ದು 65 ಕ್ಷೇತ್ರಗಳಲ್ಲಿ ಮಾತ್ರ. ಜೆಡಿಎಸ್ 58 ಕ್ಷೇತ್ರಗಳಲ್ಲಿ ಜಯಗಳಿಸಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಧರ್ಮಸಿಂಗ್ ಮುಖ್ಯಮಂತ್ರಿಯಾದರು.
ಮುಂದೆ 2006ರಲ್ಲಿ ನಡೆದ ರಾಜಕೀಯ ಬದಲಾವಣೆಯಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.
2007ರಲ್ಲಿ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೆ ವಚನಭ್ರಷ್ಟತೆಯ ಆರೋಪವನ್ನು ಜೆಡಿಎಸ್ ಹೊರಬೇಕಾಯಿತು. 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಗಳಿಸಿ ಪಕ್ಷೇತರರ ನೆರವಿನಿಂದ ಅಧಿಕಾರಕ್ಕೆ ಬಂದಿತು. ಆಗ ಕಾಂಗ್ರೆಸ್ 80 ಕ್ಷೇತ್ರ ಹಾಗೂ ಜೆಡಿಎಸ್ 28 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿತ್ತು.
ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಆಂತರಿಕ ಕಚ್ಚಾಟದಿಂದ ಹೊರತಾಗಲಿಲ್ಲ. ಹಾಗಾಗಿ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಹಾಗೂ ಜಗದೀಶ್ಶೆಟ್ಟರ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಬಿಜೆಪಿಯು ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಪಕ್ಷವಾಗಿ ಒಡೆದು ಹೋಳಾಯಿತು.
ನಂತರ ನಡೆದ 2013ರ ಚುನಾವಣೆಯಲ್ಲಿ ಕಾಂಗ್ರೆಸ್ 122 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ, ಆಡಳಿತಾರೂಢ ಬಿಜೆಪಿ ಹೀನಾಯ ಸೋಲುಂಡು ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿತು. ಬಿಜೆಪಿ ಮತ್ತು ಜೆಡಿಎಸ್ ತಲಾ 40 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದವು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಸ್ಥಿರವಾದ ಆಡಳಿತ ನೀಡಿದ್ದಾರೆ. ಚುನಾವಣೆ ಪೂರ್ವದಲ್ಲಿ ಮುಂದೆ ಅಧಿಕಾರಕ್ಕೆ ಬರುವ ಪಕ್ಷಗಳ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ನಡೆಯುತ್ತಿದೆಯಾದರೂ ಇನ್ನೂ ನಿರ್ದಿಷ್ಟವಾಗಿ ಇದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲು ಸಾಧ್ಯವಾಗಿಲ್ಲ.
2018ರ ವಿಧಾನಸಭೆ ಚುನಾವಣೆ ವೇಳೆಗೆ ಒಡೆದು ಹೋಳಾಗಿದ್ದ ಬಿಜೆಪಿ ಒಂದುಗೂಡಿದ್ದರೆ, ಜೆಡಿಎಸ್ನಲ್ಲಿ ಭಿನ್ನಮತ ಮರುಕಳುಹಿಸಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಕಳೆದ ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಜನಪ್ರಿಯ ಕಾರ್ಯಕ್ರಮಗಳ ಆಧಾರದ ಮೇಲೆ ಮತ್ತೆ ಜನಾದೇಶ ಕೋರುತ್ತಿದೆ. ರಾಜ್ಯದ ಮೂರು ದಶಕಗಳ ಇತಿಹಾಸದಲ್ಲಿ ಆಡಳಿತ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದ ಸಂಪ್ರದಾಯ ಇಲ್ಲ.
ಪ್ರತಿ ವಿಧಾನಸಭೆ ಚುನಾವಣೆಯಲ್ಲೂ ಆಡಳಿತ ವಿರೋಧಿಯಾದ ಜನಾದೇಶ ಬಂದಿದ್ದು, ಈ ಬಾರಿ ಜನತೆ ಬದಲಾವಣೆ ತಂದು ಹೊಸ ಇತಿಹಾಸಕ್ಕೆ ನಾಂದಿಹಾಡಲಿದ್ದಾರೆಯೇ ಅಥವಾ ಸಂಪ್ರದಾಯವನ್ನೇ ಮುಂದುವರೆಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.