ಇರಾನ್‌ನಲ್ಲಿ ಟರ್ಕಿ ವಿಮಾನ ಪತನ: ವಧು, ಸ್ನೇಹಿತೆಯರು ಸೇರಿ ಕನಿಷ್ಟ 11 ಜನ ಸಾವು!

ಟೆಹರಾನ್: ಸ್ನೇಹಿತರಿಗೆ ಭರ್ಜರಿ ಪಾರ್ಟಿ ನೀಡಿ ವಾಸ್ಸಾಗುತ್ತಿದ್ದ ವೇಳೆ ವಧು ಮತ್ತು ಆಕೆಯ 7 ಸ್ನೇಹಿತರು ಸೇರಿ ಕನಿಷ್ಟ 11 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಟರ್ಕಿ ವಿಮಾನವೊಂದು ಇರಾನ್ ನ ಶಹರ್ ಇ ಕಾರ್ಡ್ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡು ಈ ದುರ್ಘಟನೆ ನಡೆದಿದೆ. ಮದುವೆ ನಿಶ್ಚಯವಾಗಿದ್ದ ಉದ್ಯಮಿ ಮಗಳು ಮತ್ತು ಆಕೆಯ 7 ಸ್ನೇಹಿತೆಯರು ಸೇರಿದಂತೆ 11 ಪ್ರಯಾಣಿಕರು ವಿಮಾನದಲ್ಲಿದ್ದರು.
ಉದ್ಯಮಿ ಹುಸೈನ್‌ ಬಸರ್ನ್‌ ಎಂಬುವರ ಮಗಳು ಮೀನಾ ಬಸರ್ನ್‌ ಮದುವೆ ಮುಂದಿನ ತಿಂಗಳು 14ರಂದು ಉದ್ಯಮಿ ಮುರತ್‌ ಗೇಜರ್‌ ಜೊತೆ ಇಸ್ತಾಂಬುಲ್‌ನಲ್ಲಿ ನಿಶ್ಚಯವಾಗಿತ್ತು. ತಮ್ಮ ಮದುವೆ ನಿಶ್ವಯ ಸಂಬಂಧ ಮೀನಾ ತಮ್ಮ ಗೆಳತಿಯರಿಗೆ ದುಬೈನಲ್ಲಿ ಪಾರ್ಟಿ ನೀಡಿದ್ದರು. ಪಾರ್ಟಿಯ ಬಗ್ಗೆ ಮೀನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹರಿಬಿಟ್ಟಿದ್ದರು.
ಇನ್ನು ಪಾರ್ಟಿ ಮುಗಿಸಿಕೊಂಡು ತಮ್ಮದೇ ವಿಮಾನ ಬಂಬಾರ್ಡಿಯರ್ ಸಿಎಲ್604ನಲ್ಲಿ  ಹಿಂದುರುಗುತ್ತಿದ್ದ ಮೀನಾ ಮತ್ತು ಆಕೆಯ ಸ್ನೇಹಿತೆಯರ ಜೀವನದಲ್ಲಿ ವಿಧಿ ಆಟವಾಡಿದೆ. ಇರಾನ್‌ನ ಶಹರ್-ಇ ಕಾರ್ಡ್ ಗುಡ್ಡಗಾಡು ಪ್ರದೇಶದಲ್ಲಿ ಮೀನಾ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದೆ.
ಇನ್ನು ವಿಮಾನಕ್ಕೆ ಆಗಸದಲ್ಲೇ ಬೆಂಕಿ ಹೊತ್ತಿಕೊಂಡಿತ್ತು. ಭೂಮಿಗೆ ಅಪ್ಪಳಿಸುತ್ತಲೇ ವಿಮಾನ ಸ್ಫೋಟವಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ