ಕುರಂಗಣಿ ಬೆಟ್ಟದಲ್ಲಿ ಸಂಭವಿಸಿದ ಕಾಡ್ಗಿಚ್ಚು ದುರಂತದಲ್ಲಿ ಮೃತಪಟ್ಟ ಚಾರಣಿಗರ ಸಂಖ್ಯೆ ಒಂಭತ್ತಕ್ಕೇರಿದೆ

ಥೇಣಿ, ಮಾ.12- ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಗಣಿ ಬೆಟ್ಟದಲ್ಲಿ ಸಂಭವಿಸಿದ ಕಾಡ್ಗಿಚ್ಚು ದುರಂತದಲ್ಲಿ ಮೃತಪಟ್ಟ ಚಾರಣಿಗರ ಸಂಖ್ಯೆ ಒಂಭತ್ತಕ್ಕೇರಿದೆ. 30 ಮಂದಿಯನ್ನು ರಕ್ಷಿಸಲಾಗಿದೆ.

ಚಾರಣ ಕೈಗೊಂಡಿದ್ದ ವಿದ್ಯಾರ್ಥಿನಿಯರೂ ಸೇರಿದಂತೆ 39 ಮಂದಿ ನಿನ್ನೆ ಕಾಡ್ಗಿಚ್ಚಿನ ಪ್ರಕೋಪದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಅರಣ್ಯ ಬೆಂಕಿಯ ಕೆನ್ನಾಲಿಗೆಗೆ 9 ಮಂದಿ ಸುಟ್ಟು ಕರಕಲಾಗಿದ್ದಾರೆ ಗಾಯಗೊಂಡಿರುವ ಇತರೆ 30 ಮಂದಿಯನ್ನು ರಕ್ಷಿಸಲಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಚೆನ್ನೈ ಟ್ರೆಕ್ಕಿಂಗ್ ಕ್ಲಬ್ ಕುರಂಗಣಿ ಪರ್ವತಕ್ಕೆ ಚಾರಣ ಕೈಗೊಂಡಿತ್ತು. ಚಾರಣವನ್ನು ಯಶಸ್ವಿಯಾಗಿ ಪೂರೈಸಿ 25 ವಿದ್ಯಾರ್ಥಿನಿಯರು, ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಒಳಗೊಂಡ ತಂಡ ನಿನ್ನೆ ಹಿಂದಿರುಗುತ್ತಿದ್ದಾಗ ಕಾಡ್ಗಿಚ್ಚು ಭುಗಿಲೆದ್ದಿತು. ಬೆಟ್ಟದ ದಿಬ್ಬ(ದಿಣ್ಣೆ) ಬಳಿ ಅವರೆಲ್ಲರೂ ಸಿಲುಕಿದ್ದರು. ಬೆಂಕಿಯ ಕೆನ್ನಾಲಿಗೆ ಅವರಿದ್ದ ಪ್ರದೇಶವನ್ನು ಸುತ್ತುವರಿದಿತ್ತು. ಈ ಘಟನೆಯಿಂದ ಗಾಬರಿಗೊಂಡ ಅನೇಕರು ತಪ್ಪಿಸಿಕೊಳ್ಳಲು ಕೆಳಗಿದ್ದ ಹಳ್ಳಕ್ಕೆ ಧುಮುಕಿದಾಗ ಗಾಯಗಳಾದವು. ಅಗ್ನಿಯ ರೌದ್ರಾವತಾರದಿಂದ 9 ಮಂದಿ ಮೃತಪಟ್ಟಿದ್ದು, ಅನೇಕರು ಸುಟ್ಟ ಗಾಯಗಳು ಮತ್ತು ದಟ್ಟ ಹೊಗೆಯಿಂದ ನಿತ್ರಾಣಗೊಂಡಿದ್ದಾರೆ.

ಕಾಡ್ಗಿಚ್ಚಿನ ಸುದ್ದಿ ತಿಳಿದ ಕೂಡಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ನಿನ್ನೆಯಿಂದ ನಡೆದ ಬಿರುಸಿನ ಕಾರ್ಯಾಚರಣೆಯಲ್ಲಿ 30 ಜನರನ್ನು ರಕ್ಷಿಸಲಾಗಿದೆ. ತಮಿಳುನಾಡು ಪೆÇಲೀಸರು ಮತ್ತು ಅರಣ್ಯ ಸಿಬ್ಬಂದಿಯೊಂದಿಗೆ ಕೇರಳ ರಾಜ್ಯದ ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ತೀವ್ರ ಸುಟ್ಟಗಾಯಗಳಾಗಿರುವ ವಿದ್ಯಾರ್ಥಿನಿಯರನ್ನು ಮಧುರೈನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಕಲೆಕ್ಟರ್ ಪಲ್ಲವಿ ಬಲದೇವ್ ತಿಳಿಸಿದ್ದಾರೆ.

ಚೆನ್ನೈನಿಂದ 27 ಹಾಗೂ ತಮಿಳುನಾಡಿನ ಈರೋಡ್ ಮತ್ತು ತಿರುಪೂರ್‍ನಿಂದ 13 ಮಂದಿ ಚಾರಣದಲ್ಲಿ ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಈ ಚಾರಣ ಕೈಗೊಂಡು ಬೆಟ್ಟದ ತುದಿ ತಲುಪಿ ಹಿಂದಿರುಗುತ್ತಿದ್ದ ಈ ಸಾಹಸಿಗರು ಶನಿವಾರ ರಾತ್ರಿ ಎಸ್ಟೇಟ್ ಒಂದರಲ್ಲಿ ವಾಸ್ತವ್ಯ ಹೂಡಿ ಭಾನುವಾರ ಬೆಟ್ಟದ ತಪ್ಪಲಿಗೆ ಹಿಂದಿಗುರುತ್ತಿದ್ದಾಗ ವಿನಾಶಕಾರಿ ಕಾಡ್ಗಿಚ್ಚು ಆವರಿಸಿ ಈ ದುರಂತ ಸಂಭವಿಸಿತು.

ಪ್ರಸಿದ್ದ ಪೆರಿಯಾರ್ ನ್ಯಾಷನಲ್ ಪಾರ್ಕ್ ಇರುವ ಕೇರಳದ ತೆಕ್ಕಡಿ ಅರಣ್ಯ ಪ್ರದೇಶದ ಗಡಿಯಲ್ಲಿರುವ ಥೇಣಿ ಜಿಲ್ಲೆಯ ಕುರುಂಗಣಿ ಬೆಟ್ಟವು ಚಾರಣಕ್ಕೆ ಪ್ರಸಿದ್ಧ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ