ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ತನ್ನ ಶಿಕ್ಷೆಯನ್ನು ಎತ್ತಿಹಿಡಿದ ಆದೇಶವನ್ನು ಕೈ ಬಿಡುವಂತೆ ಕೋರಿ ಹಂತಕ ಎ.ಜಿ.ಪೆರಾರಿವಳನ್ ಸಲ್ಲಿಸಿರುವ ಮನವಿ ಅರ್ಜಿಯನ್ನು ವಜಾಗೊಳಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಸುಪ್ರೀಂಕೋರ್ಟ್‍ಗೆ ಕೋರಿದೆ

ನವದೆಹಲಿ, ಮಾ.12-ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ತನ್ನ ಶಿಕ್ಷೆಯನ್ನು ಎತ್ತಿಹಿಡಿದ ಆದೇಶವನ್ನು ಕೈ ಬಿಡುವಂತೆ ಕೋರಿ ಹಂತಕ ಎ.ಜಿ.ಪೆರಾರಿವಳನ್ ಸಲ್ಲಿಸಿರುವ ಮನವಿ ಅರ್ಜಿಯನ್ನು ವಜಾಗೊಳಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಸುಪ್ರೀಂಕೋರ್ಟ್‍ಗೆ ಕೋರಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಮರು ತನಿಖೆ ನಡೆಸಲು ಕೋರಿರುವುದರಿಂದ, ಶಿಕ್ಷೆ ಆದೇಶ ಕೈ ಬಿಡುವಂತೆ ಕೋರಿ ಅಪರಾಧಿ ಪೆರಾರಿವಳನ್(45) ಸಲ್ಲಿಸಿರುವ ಅರ್ಜಿ ಮನ್ನಣೆಗೆ ಯೋಗ್ಯವಲ್ಲ ಎಂದು ಸಿಬಿಐ ವಾದಿಸಿದೆ.

ತಾನು ಈಗಾಗಲೇ ಕಳೆದ 26 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದೇನೆ. ಆದಕಾರಣ ತನ್ನ ಶಿಕ್ಷೆಯನ್ನು ಕೊನೆಗೊಳಿಸುವಂತೆ ಕೋರಿ ಪೆರಾರಿವಳನ್ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿದ್ದ.

ರಾಜೀವ್‍ಗಾಂಧಿ ಹತ್ಯೆ ಹಿಂದಿನ ದೊಡ್ಡ ಸಂಚು ಮತ್ತು ಪಿತೂರಿ ಕುರಿತು ತನಿಖೆ ನಡೆಸುತ್ತಿರುವ ಸಿಬಿಐನ ಬಹು ಶಿಸ್ತು ಉಸ್ತುವಾರಿ ಸಂಸ್ಥೆ (ಎಂಡಿಎಂಎ) ಈ ಸಂಬಂಧ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ.

ಈ ಸಂಬಂಧ ಅಪರಾಧಿ ಎ.ಜಿ.ಪೆರಾರಿವಳನ್ ಸಲ್ಲಿಸಿರುವ ಅರ್ಜಿ ಪರಿಗಣನೆಗೆ ಯೋಗ್ಯವಲ್ಲ. ಏಕೆಂದರೆ ಈ ಪ್ರಕರಣದ ಬಗ್ಗೆ ಈಗಾಗಲೇ ಸಂಪೂರ್ಣ ವಿಚಾರಣೆ ನಡೆದು ಅಂತಿಮ ಆದೇಶ ಹೊರಬಿದ್ದಿದೆ. ಹೀಗಾಗಿ ಆತನ ಅರ್ಜಿಯನ್ನ ಪುರಸ್ಕರಿಸದಂತೆ ಸಿಬಿಐ ಮನವಿ ಸಲ್ಲಿಸಿದೆ.

ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಹತ್ಯೆ ಪ್ರಕರಣದಲ್ಲಿ ಪೆರಾರಿವಳನ್ ಒಳಸಂಚು ಸಾಬೀತಾಗಿದೆ. ಆತನ ಪಿತೂರಿಯಿಂದ ಮಾಜಿ ಪ್ರಧಾನಿ ಹತ್ಯೆಯಾಗಿದ್ದಾರೆ. ಈ ಸಂಬಂಧ ಈಗಾಗಲೇ ಸುಪ್ರೀಂಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ ಎಂಬ ಅಂಶವನ್ನು ಸಿಬಿಐ ಉಲ್ಲೇಖಸಿದೆ.

ತನ್ನ ಶಿಕ್ಷೆಗೆ ಸಂಬಂಧಪಟ್ಟಂತೆ 1999ರ ಮೇ 11ರಂದು ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದತೀರ್ಪನ್ನು ಕೈ ಬಿಡುವಂತೆ ಕೋರಿ ಪೆರಾರಿವಳನ್ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ.

ಈ ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂಕೋರ್ಟ್ ಕಳೆದ ಜ.24ರಂದು ಸಿಬಿಐಗೆ ಸೂಚನೆ ನೀಡಿ, ಈ ಸಂಬಂಧ ಪ್ರತ್ಯುತ್ತರ ಸಲ್ಲಿಸುವಂತೆ ತಿಳಿಸಿತ್ತು.
ನ್ಯಾಯಮೂರ್ತಿಗಳಾದ ರಂಜನ್ ಗೊಗಯ್ ಮತ್ತು ಆರ್.ಭಾನುಮತಿ ಅವರನ್ನು ಒಳಗೊಂಡ ಪೀಠ ಅಪರಾಧಿಯ ಅರ್ಜಿ0ುನ್ನು ಪುರಸ್ಕರಿಸಿ ಸಿಬಿಐಗೆ ನಿರ್ದೇಶನ ನೀಡಿತ್ತು.

ಮೇ 11, 1999ರ ತನ್ನ ಆದೇಶದಲ್ಲಿ ಸುಪ್ರೀಂಕೋರ್ಟ್ ನಾಲ್ವರು ಪ್ರಮುಖ ಅಪರಾಧಿಗಳಾದ ಪೆರಾರಿವಳನ್, ಮುರುಘನ್, ಸಂತಮ್ ಮತ್ತು ನಳಿನಿ ಅವರ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.

ಆದಾಗ್ಯೂ ರಾಜ್ಯ ಸರ್ಕಾರದ ಶಿಫಾರಸು ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಮನವಿ ಹಿನ್ನೆಲೆಯಲ್ಲಿ 2000ರ ಏಪ್ರಿಲ್‍ನಲ್ಲಿ ತಮಿಳುನಾಡು ರಾಜ್ಯಪಾಲರು ನಳಿನಿಯ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದ್ದರು.

2014ರ ಫೆ.18ರಂದು ಪೆರಾರಿವಳನ್, ಸಂತಮ್ ಮತ್ತು ಮುರುಗನ್ ಅವರ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಅವರ ಕ್ಷಮಾದಾನ ಮನವಿಗಳ ಬಗ್ಗೆ ನಿರ್ಧರಿಸುವಲ್ಲಿ ಕೇಂದ್ರ ಸರ್ಕಾರ 11 ವರ್ಷಗಳಷ್ಟು ವಿಳಂಬ ಮಾಡಿದೆ ಎಂಬ ಕಾರಣದ ಮೇಲೆ ಈ ಮೂವರ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಲಾಗಿತ್ತು.

ತಾನು ಈಗಾಗಲೇ ಕಳೆದ 26 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದೇನೆ. ಆದಕಾರಣ ತನ್ನ ಶಿಕ್ಷೆಯನ್ನು ಕೊನೆಗೊಳಿಸುವಂತೆ ಕೋರಿ ಪೆರಾರಿವಳನ್ ತನ್ನ ವಕೀಲ ಗೋಪಾಲ ಶಂಕರ್‍ನಾರಾಯಣನ್ ಅವರ ಮೂಲಕ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿದ್ದ.

21ನೇ ಮೇ. 1991ರಂದು ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿದ್ದ ರಾಜೀವ್‍ಗಾಂಧಿ ಅವರನ್ನು ಎಲ್‍ಟಿಟಿಇ ಮಾನವಬಾಂಬರ್ ಧನು ಹತ್ಯೆ ಮಾಡಿದ್ದಳು. ಈ ಘಟನೆಯಲ್ಲಿ ಧನು ಸೇರಿದಂತೆ ಇತರ 14 ಮಂದಿ ಹತರಾದರು.

ಧನು ಮಾನವಬಾಂಬ್ ಸ್ಫೋಟಿಸಲು ಸುಧಾರಿತ ಸ್ಫೋಟಕಕ್ಕೆ ಪೆರಾರಿವಳನ್ 9 ವೋಲ್ಟ್‍ಗಳ ಎರಡು ಬ್ಯಾಟರಿಗಳನ್ನು ಪೂರೈಸಿ ರಾಜೀವ್ ಗಾಂಧಿ ಹತ್ಯೆಗೆ ನೆರವಾಗಿದ್ದ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ