ಬೆಳಗಾವಿಯಲ್ಲಿ ದೇಶದ ಅತೀ ಎತ್ತರದ ರಾಷ್ಟ್ರಧ್ವಜ ಲೋಕಾರ್ಪಣೆ

ಬೆಳಗಾವಿ: ನಗರದ ಕೋಟೆ ಕೆರೆ ಬಳಿ ಬುಡಾ ಕಚೇರಿಯ ಆವರಣದಲ್ಲಿ ದೇಶದ ಅತೀ ಎತ್ತರದ ರಾಷ್ಟ್ರಧ್ವಜ ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಧ್ವಜ ಹಾರಾಟ ಯಂತ್ರದ ಬಟನ್ ಒತ್ತುವ ಮೂಲಕ ಧ್ವಜಾರೋಹಣಗೊಳಿಸಿದರು. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಶಾಸಕ ಫಿರೋಜ್ ಸೇಠ್, ಜಿಲ್ಲಾಧಿಕಾರಿ ಜಿಯಾಉಲ್ಲಾ ಇದ್ದರು.
ವಿಶೇಷತೆ: ರೂ.1.67 ಕೋಟಿ ವೆಚ್ಚದಲ್ಲಿ 110 ಮೀಟರ್ ಎತ್ತರದ ಕಂಬದ ಮೇಲೆ 120-80 ಅಡಿ ಅಗಲದ ರಾಷ್ಟ್ರಧ್ವಜ ಇದಾಗಿದ್ದು, ದಿನದ 24 ಗಂಟೆ ಮತ್ತು ವರ್ಷದ 365 ದಿನ ಧ್ವಜ ಹಾರಾಡಲಿದೆ. ಈ ಧ್ವಜದ ಹಗ್ಗದ ದಪ್ಪ 8 ಮಿ.ಮಿ ಮತ್ತು 50 ಕೆಜಿ ಬಟ್ಟೆಯಲ್ಲಿ ತ್ರಿವರ್ಣ ಧ್ವಜ ಸಿದ್ದಪಡಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಮೇಲೆ ರಾತ್ರಿವೇಳೆ ಧ್ವಜಸ್ತಂಬ ಕಾಣುವಂತೆ ಫೋಕಸ್ ಲೈಟ್ ವ್ಯವಸ್ಥೆ ಮಾಡಲಾಗಿದೆ. ಭಾರತ-ಪಾಕ್ ಗಡಿಯ ವಾಘಾ ಗೇಟ್ ಹತ್ತಿರದ ಧ್ವಜಸ್ತಂಬದಷ್ಟೆ ಎತ್ತರ ಈ ಧ್ವಜ ಸ್ತಂಬ ಎತ್ತರವಾಗಿದೆ

ಸೇಲ್ಫಿ ಸಂಭ್ರಮ: ಬೆಳಗಾವಿಗರು ತಮ್ಮ ಮೊಬೈಲ್ ನಲ್ಲಿ ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದರ ಮೂಲಕ ಸಂಭ್ರಮಿಸಿದರು. ನೂರಾರು ಜನ ಈ ಸಂಭ್ರದ ಕ್ಷಣಕ್ಕೆ ಸಾಕ್ಷಿಯಾದರು. ಯುವಕರು ರಾಷ್ಟ್ರ ಧ್ವಜರೋಹಣದ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿರುವುದು ಗಮನ ಸೆಳೆಯಿತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ