ನವದೆಹಲಿ, ಮಾ.12- ಉದ್ಯಾನನಗರಿ ಬೆಂಗಳೂರಿನ ದಟ್ಟ ಸಂಚಾರ ಒತ್ತಡ ನಿವಾರಣೆಗಾಗಿ ರಾಜ್ಯಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಸ್ಟೀಲ್ಬ್ರಿಡ್ಜ್ ಕಾಮಗಾರಿಗೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ಇದರಿಂದಾಗಿ ಯೋಜನೆಯನ್ನು ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಎದುರಾಗಿದ್ದ ವಿಘ್ನವೊಂದು ನಿವಾರಣೆಯಾದಂತಾಗಿದೆ.
ಉಕ್ಕು ಸೇತುವೆ ನಿರ್ಮಾಣ ಕಾಮಗಾರಿಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿ ಬಿ.ಪಿ.ಮಹೇಶ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.
ಕಾಮಗಾರಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಹೈಕೋರ್ಟ್ನ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಬೆಂಗಳೂರಿನ ಬಸವೇಶ್ವರ ವೃತ್ತದಿಂದ 6.7 ಕಿಲೋ ಮೀಟರ್ ಉದ್ದದ ಉಕ್ಕು ಸೇತುವೆ ನಿರ್ಮಾಣದಿಂದ ನಗರದ ಅತ್ಯಂತ ಸಂಚಾರ ದಟ್ಟಣೆ ನಿವಾರಣೆಯಾಗುತ್ತದೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳ ಸಂಚಾರ ವ್ಯವಸ್ಥೆ ಸುಗಮವಾಗುತ್ತದೆ ಎಂಬ ಮಹತ್ವಾಕಾಂಕ್ಷೆ ಯೋಜನೆಯೊಂದಿಗೆ ರಾಜ್ಯ ಸರ್ಕಾರ ಉಕ್ಕು ಸೇತುವೆ ನಿರ್ಮಾಣ ಯೋಜನೆಗೆ ಮುಂದಾಗಿತ್ತು.
ಈ ಯೋಜನೆಗೆ ಸುಮಾರು 1800 ಕೋಟಿ ರೂ.ಗಳು ವೆಚ್ಚವಾಗುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ, ಸ್ಟೀಲ್ಬ್ರಿಡ್ಜ್ ನಿರ್ಮಾಣದಿಂದ ಬೆಂಗಳೂರಿನ ಪರಿಸರಕ್ಕೆ ಭಾರೀ ಧಕ್ಕೆಯಾಗುತ್ತದೆ ಮತ್ತು ಸಾವಿರಾರು ಮರಗಳು ಕಡಿತಲೆಯಾಗುತ್ತವೆ ಎಂದು ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.
ಅಲ್ಲದೆ, ವಿರೋಧ ಪಕ್ಷವಾದ ಬಿಜೆಪಿ ಸಹ ಈ ಯೋಜನೆ ಬಗ್ಗೆ ಭಾರೀ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತ್ತು.
ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪರಿಹಾರವಾಗಿ 60 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪರಿಸರ ರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿತ್ತು.
ಈ ಮಧ್ಯೆ ಉದ್ದೇಶದ ಕಾಮಗಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಕೋರಿ ಬಿ.ಪಿ.ಮಹೇಶ್ ಅವರು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.
ಈ ಹಿನ್ನೆಲೆಯಲ್ಲಿ ಮಹೇಶ್ ಅವರು ಮಧ್ಯಂತರ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಉದ್ದೇಶಿತ ಕಾಮಗಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿರುವುದರಿಂದ ರಾಜ್ಯ ಸರ್ಕಾರಕ್ಕೆ ಯೋಜನೆ ಮುಂದುವರಿಸಲು ನಿರಾಳವಾದಂತಾಗಿದೆ.