ಚೆನ್ನೈ: ತಮಿಳುನಾಡಿನ ಥೇಣಿ ಜಲ್ಲೆಯ ಕುರಂಗಣಿ ಬೆಟ್ಟ ಪ್ರದೇಶದಲ್ಲಿ ಉಂಟಾಗಿರುವ ಕಾಡ್ಗಿಚ್ಚಿಗೆ 9 ಮಂದಿ ಸಜೀವ ದಹನವಾಗದ್ದಾರೆ. ಇನ್ನೂ ಕೆಲವರು ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಕಾಡಿನ ಬೆಂಕಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು,ನಾಲ್ವರು ಪುರುಷರು ಮತ್ತು ಒಂದು ಮಗು ಸೇರಿದೆ. ಒಟ್ಟು 27 ಮಂದಿಯನ್ನು ಕಾಡಿನ ಬೆಂಕಿಯಿಂದ ರಕ್ಷಿಸಲಾಗಿದೆ; ಇವರಲ್ಲಿ 10 ಮಂದಿ ಗಾಯಾಳುಗಳಾಗಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಿದೆ.
ಕಾಡಿನ ಬೆಂಕಿಯಲ್ಲಿ ಸಿಲುಕಿಕೊಂಡ ಚಾರಣಿಗರು 8ರಿಂದ 30ರ ವಯೋಮಾನದವರು. ಇವರಲ್ಲಿ 9 ಮಂದಿ ಸುಟ್ಟು ಕರಕಲಾಗಿದ್ದಾರೆ. ತೀವ್ರವಾಗಿ ಹಬ್ಬುತ್ತಿರುವ ಕಾಡಿನ ಬೆಂಕಿಯಿಂದಾಗಿ ರಕ್ಷಣಾ ಕಾರ್ಯಕರ್ತರಿಗೆ ಅವರನ್ನು ತಲುಪಲು ಸಾಧ್ಯವಾಗುತ್ತಿಲ್ಲ..
ರಕ್ಷಣಾ ಕಾರ್ಯಾಚರಣೆಯಲ್ಲಿ ಗರುಡ ಕಮಾಂಡೋ ದಳದ ಆರು ಕಮಾಂಡೋಗಳನ್ನು, ಭಾರತೀಯ ವಾಯು ಪಡೆಯ ಮೂರು ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ. ಐಎಎಫ್ ನ ಇನ್ನೊಂದು ಹೆಲಿಕಾಪ್ಟರ್ ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.