ಇಂಫಾಲ್, ಮಾ.12-ಮಣಿಪುರದಲ್ಲಿ ನಡೆಯುತ್ತಿರುವ 11ನೆ ರಾಷ್ಟ್ರೀಯ ಗಾಲಿಕುರ್ಚಿ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ಮೂರು ಪದಕಗಳನ್ನು ಗೆದ್ದುಕೊಂಡಿದೆ.
ಇಲ್ಲಿನ ಕುಮಾನ್ ಲಾಂಪಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಗಳಲ್ಲಿ ರಾಜ್ಯಕ್ಕೆ ಸೆಬರ್ ಮತ್ತು ಹಿಪ್ಪಿ ವಿಭಾಗದಲ್ಲಿ ಎರಡು ಬೆಳ್ಳಿ ಹಾಗೂ ಫಾಯಿಲ್ ವಿಭಾಗದಲ್ಲಿ ಒಂದು ಕಂಚಿನ ಪದಕ ಬಂದಿದೆ.
ಇರೋಮ್ ಡೆಬಾಂಬ್ ಸಿಂಗ್ ಅವರಿಂದ ತರಬೇತುಗೊಳಗಾಗಿದ್ದ ತ್ಯಾಗರಾಜ್, ವೆಂಕಟೇಶ್ಬಾಬು ಮತ್ತು ಪೃಥ್ವಿರಾಜ್ ಅವರು ರಾಜ್ಯವನ್ನು ಪ್ರತಿನಿಧಿಸಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪದಕ ಪಡೆದುಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಸೆಬರ್ ವಿಭಾಗದ ಫೈನಲ್ನಲ್ಲಿ ಮಣಿಪುರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿತು.
ಹಿಪ್ಪಿ ವಿಭಾಗದ ಫೈನಲ್ನಲ್ಲಿ ಒಡಿಶಾ ತಂಡದ ಎದುರು ಸೋಲು ಕಂಡ ರಾಜ್ಯ ಬೆಳ್ಳಿ ಪದಕ ಪಡೆದುಕೊಂಡಿತು.
ಅದೇ ರೀತಿ ಫಾಯಿಲ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಒಡಿಶಾ ಎದುರು ರೋಚಕ ಸೋಲು ಅನುಭವಿಸುವ ಮೂಲಕ ಎಂ.ಎಚ್.ಪೃಥ್ವಿರಾಜ್ ಕಂಚು ಪದಕ ಪಡೆದುಕೊಂಡರು.