ಬೆಂಗಳೂರು,ಮಾ.12- ಪ್ರಸ್ತುತ ಜಾರಿಯಲ್ಲಿರುವ ಪ್ಯಾಕೇಜ್ ಪದ್ಧತಿಯಿಂದ ಗುತ್ತಿಗೆದಾರರಿಗೆ ಅನಾನುಕೂಲವಾಗುತ್ತಿದ್ದು , ಕೂಡಲೇ ಈ ಪ್ಯಾಕೇಜ್ ಪದ್ಧತಿಯನ್ನು ರದ್ದು ಮಾಡಬೇಕೆಂದು ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಯಾಕೇಜ್ ಪದ್ಧತಿಯನ್ನು ತೆಗೆಯಬೇಕು ಎನ್ನುವುದು ನಮ್ಮ ಸಂಘದ ನಿಲುವಾಗಿದೆ. ಆದರೆ ಈ ನಿಯಮ ಜಾರಿಗೊಳಿಸಿದ ಸಮಯದಿಂದ ಅನ್ಯ ಮಾರ್ಗವಿಲ್ಲದೆ ಗುತ್ತಿಗೆದಾರರು ಒಪ್ಪಿಕೊಳ್ಳಲು ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪ್ಯಾಕೇಜ್ ಪದ್ಧತಿ ನಿಯಮವು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿಗೊಳಿಸಿರುವ ಕಠಿಣ ನಿಯಮಾವಳಿಗಳನ್ನು ತದ್ರೂಪ ನಕಲು ಮಾಡಿದಂತೆ ಕಂಡುಬರುತ್ತಿದೆ. ಇದರಿಂದ ರಾಜ್ಯ ಗುತ್ತಿಗೆದಾರರು ಟೆಂಡರ್ನಲ್ಲಿ ಭಾಗವಹಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಪ್ಯಾಕೇಜ್ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
2017ರ ಅಕ್ಟೋಬರ್ನಲ್ಲಿ ನಡೆದ ರಾಜ್ಯ ಗುತ್ತಿಗೆದಾರರ ಸಮ್ಮೇಳನದಲ್ಲಿ ಸಂಘದ ವತಿಯಿಂದ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ್ದೆವು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಬೇಡಿಕೆಯೂ ಈಡೇರಿಲ್ಲ. ನಮ್ಮ ಪ್ರಮುಖ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಣ್ಣಪುಟ್ಟ ಕಾಮಗಾರಿಗಳನ್ನು ಒಗ್ಗೂಡಿಸಿ ಪ್ಯಾಕೇಜ್ ಪದ್ದತಿಯಲ್ಲಿ ಟೆಂಡರ್ ಕರೆಯುವುದನ್ನು ನಿಲ್ಲಿಸಬೇಕು, ಪ್ರತಿ ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಬೇಕು, ಟೆಂಡರ್ನಲ್ಲಿ ಭಾಗವಹಿಸುವ ಗುತ್ತಿಗೆದಾರರು ಒಂದು ಲಕೋಟೆ ಪದ್ಧತಿ(ಲಾಟರಿ)ಯನ್ನು ಹಾಲಿ ಇರುವ 50 ಲಕ್ಷದ ಮಿತಿಯನ್ನು 5 ಕೋಟಿಗೆ ಯಾವುದೇ ಷರತ್ತುಗಳಿಲ್ಲದೆ ಹೆಚ್ಚಿಸಬೇಕು. ದ್ವಿ ಲಕೋಟೆ ಪದ್ಧತಿಯಲ್ಲಿ ಸರಿಯಾದ ಮಾನದಂಡವಿಲ್ಲದೆ ಎಲ್ಲ ಷರತ್ತುಗಳನ್ನು ತಮ್ಮ ಇಚ್ಛೆಗೆ ಬಂದಂತೆ ಪ್ರತ್ಯೇಕ ನಿಯಮ ರೂಪಿಸಿರುವುದು ಎಲ್ಲ ಇಲಾಖೆಗಳಲ್ಲಿ ಕಂಡುಬಂದಿದೆ. ಹಾಗಾಗಿ ಗುತ್ತಿಗೆದಾರರಿಗೆ ಏಕರೂಪ ನಿಯಮವನ್ನು ರಾಜ್ಯಕ್ಕೆ ಅನ್ವಯವಾಗುವಂತೆ ನೋಡಿಕೊಳ್ಳಬೇಕು ಎಂದರು.
ಲೋಕೋಪಯೋಗಿ ಇಲಾಖೆಯಲ್ಲಿ ದರಪಟ್ಟಿ ತಯಾರಿಸುವಾಗ ಸಾಮಾಗ್ರಿ ಮತ್ತು ಕಾರ್ಮಿಕರ ವೇತನವನ್ನು ಪ್ರಸಕ್ತ ಮಾರುಕಟ್ಟೆ ದರಗಳ ಅನ್ವಯ ನೀಡಬೇಕು. ಕರ್ನಾಟಕ ರಾಜ್ಯ ಗುತ್ತಿಗೆದಾರರ ನೋಂದಣಿಯನ್ನು ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಮಾಡದೆ ಏಕಗವಾಕ್ಷಿ ಮುಖಾಂತರ ಒಂದೇ ಕಚೇರಿಯಲ್ಲಿ ನೋಂದಣಿ ಮಾಡಲು ಮಾನ್ಯತೆ ನೀಡಬೇಕೆಂದು ಆಗ್ರಹಿಸಿದರು.
ಗುತ್ತಿಗೆದಾರರ ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ ನೀಡಬೇಕು, ಆನ್ಲೈನ್ ಪಾವತಿಯಲ್ಲಿ ಅಧೀಕ್ಷಕ ಅಭಿಯಂತರರ ಸಹಿಯನ್ನು ತಂತ್ರಾಂಶದಿಂದ ಕೈಬಿಡಬೇಕು, ಕೆಆರ್ಐಡಿಎಲ್/ನಿರ್ಮಿತಿ ಕೇಂದ್ರಗಳಿಗೆ ನೇರವಾಗಿ ಕಾಮಗಾರಿ ವಹಿಸುವುದನ್ನು ನಿಲ್ಲಿಸಬೇಕು. ಅವರು ಸಹ ಇತರೆ ಗುತ್ತಿಗೆದಾರರಂತೆ ಟೆಂಡರ್ನಲ್ಲಿ ಭಾಗವಹಿಸಿ ಗುತ್ತಿಗೆ ಪಡೆಯುವಂತೆ ಮಾಡಬೇಕು. ಜಿಎಸ್ಟಿ ಜಾರಿಗೊಂಡ ನಂತರ ಹಿಂದಿನ ಕಾಮಗಾರಿ ಆದೇಶವಿರುವ ಚಾಲ್ತಿ ಕಾಮಗಾರಿಗಳಿಗೆ ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಆದೇಶದಂತೆ ಗುತ್ತಿಗೆದಾರರಿಗೆ ಜಿಎಸ್ಟಿ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು, ಬಿಬಿಎಂಪಿ ಪಾಲಿಕೆಯಲ್ಲಿರುವ ಗುತ್ತಿಗೆದಾರರ ಎಲ್ಲ ಬಾಕಿ ಬಿಲ್ಗಳ ಹಣ ಪಾವತಿಗೆ ಭರವಸೆ ನೀಡಿದ್ದರು. ಆದರೆ ಇದುವರೆಗೂ ಹಣ ಪಾವತಿಯಾಗಿಲ್ಲ. 21 ತಿಂಗಳ ಬಾಕಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಅಂಬಿಕಾಪತಿ, ಕಾರ್ಯಾಧ್ಯಕ್ಷ ರಮೇಶ್, ಖಜಾಂಚಿ ಪುರುಷೋತ್ತಮ್, ಪ್ರಧಾನ ಪೆÇೀಷಕ ಕೆಂಪಣ್ಣ ಉಪಸ್ಥಿತರಿದ್ದರು.