ಡೌಮಾ, ಮಾ.11-ಬಂಡುಕೋರರ ನಿಯಂತ್ರಣದಲ್ಲಿರುವ ಸಿರಿಯಾದ ಪೂರ್ವ ಘೆËಟಾದಲ್ಲಿ ಕಳೆದ 20 ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಹತರಾದ ನಾಗರಿಕರ ಸಂಖ್ಯೆ 1,100ಕ್ಕೇರಿದೆ. ಇದೇ ವೇಳೆ ಉಗ್ರರನ್ನು ಸದೆಬಡಿದು ನಗರವನ್ನು ವಿಮೋಚನೆಗೊಳಿಸುವ ಕಾರ್ಯಾಚರಣೆಯನ್ನು ಸಿರಿಯಾ ಸೇನೆ ಮತ್ತಷ್ಟು ತೀವ್ರಗೊಳಿಸಿದೆ.
ಪೂರ್ವ ಘೆËಟಾವನ್ನು ಇಬ್ಭಾಗಿಸುವ ಕ್ರಮವಾಗಿ ಸೇನೆಯು ಆ ನಗರದ ಸಂಪರ್ಕವನ್ನು ಕಡಿತಗೊಳಿಸಿದ್ದು, ನಿರ್ಣಾಯಕ ಕಾರ್ಯಾಚರಣೆಗೆ ಸಜ್ಜಾಗಿದೆ. ಆದರೆ, ಈ ಸಂಘರ್ಷದಲ್ಲಿ ಮುಗ್ಧ ನಾಗರಿಕರು ಬಲಿಯಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ವ್ಯಕ್ತವಾಗಿದೆ.
ಫೆ.18ರಿಂದ ಪೂರ್ವ ಘೌಟದಲ್ಲಿ ಸರ್ಕಾರಿ ಮಿತ್ರ ಪಡೆಗಳು ಹಾಗೂ ಅದಕ್ಕೆ ಬೆಂಬಲ ನೀಡಿರುವ ಮತ್ತೊಂದು ಬಂಡುಕೋರರು ಉಗ್ರರಿಂದ ನಗರವನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಘರ್ಷ ಮತ್ತು ಹಿಂಸಾಚಾರದಲ್ಲಿ ಈವರೆಗೆ 1,100ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ. ಹಿಂಸಾಚಾರ ನಿಲ್ಲಿಸುವಂತೆ ಜಾಗತಿಕ ಮಟ್ಟದಲ್ಲಿ ಮನವಿಗಳೂ ಕೇಳಿ ಬಂದಿದ್ದರೂ ಕಾರ್ಯಾಚರಣೆ ಮುಂದುವರಿದಿದೆ.
ನಗರದ ಅನೇಕ ಪ್ರದೇಶಗಳನ್ನು ಸರ್ಕಾರಿ ಸೇನೆ ವಶಕ್ಕೆ ತೆಗೆದುಕೊಂಡಿದ್ದು, ಇನ್ನುಳಿದ ಸ್ಥಳಗಳಲ್ಲಿ ಉಗ್ರರೊಂದಿಗೆ ಘರ್ಷಣೆ ತೀವ್ರಗೊಂಡಿದೆ.