ನವದೆಹಲಿ, ಮಾ.10-ಭಾರತ ಮತ್ತು ಫ್ರಾನ್ಸ್ ನಡುವೆ ಉತ್ತಮ ಸಂಬಂಧ ಇದೆ. ಈ ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳ ಮಧ್ಯೆ ಐತಿಹಾಸಿಕ ನಂಟು ಇದೆ. ಉಭಯ ರಾಷ್ಟ್ರಗಳ ನಡುವಣ ಆರ್ಥಿಕ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಬಲವರ್ಧನೆಯಾಗಲಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.
ನಾಲ್ಕು ದಿನಗಳ ಭಾರತ ಭೇಟಿಗಾಗಿ ನಿನ್ನೆ ನವದೆಹಲಿಗೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷರಿಗೆ ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಸಂಪ್ರದಾಯಿಕ ಸ್ವಾಗತ ನೀಡಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ವಾಗತ ಸಮಾರಂಭದ ನಂತರ ಮಾತನಾಡಿದ ಮ್ಯಾಕ್ರೋನ್, ನಮ್ಮ (ಭಾರತ-ಫ್ರಾನ್ಸ್) ಸಂಬಂಧಕ್ಕೆ ಚಾರಿತ್ರಿಕ ಇತಿಹಾಸವಿದೆ. ಈ ಎರಡೂ ರಾಷ್ಟ್ರಗಳ ನಡುವೆ ಅನೇಕ ವಿಷಯಗಳಲ್ಲಿ ಸಾಮತ್ಯೆ ಇದೆ. ನನ್ನ ಭಾರತ ಭೇಟಿಯಿಂದ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ ಆರ್ಥಿಕ, ರಾಜಕೀಯ ಮತ್ತು ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಸಂಬಂಧ ವೃದ್ದಿಯಾಗಲಿದೆ ಎಂದರು.
ನಂತರ ಫ್ರೆಂಚ್ ರಾಷ್ಟ್ರಾಧ್ಯಕ್ಷರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ನಂತರ ಉನ್ನತ ನಿಯೋಗದ ಸಭೆಯಲ್ಲಿ ವಿವಿಧ ಯೋಜನೆಗಳು ಮತ್ತು ಅಭಿವೃದ್ದಿ ಕಾರ್ಯಗಳಿಗೆ ಸಹಿ ಹಾಕಲಾಯಿತು. ಭಯೋತ್ಪಾದನೆ ವಿರುದ್ಧ ಹೋರಾಡಲು ಮೋದಿ ಮತ್ತು ಮ್ಯಾಕ್ರೋನ್ ಪರಸ್ಪರ ಕೈಜೋಡಿಸಿದ್ದಾರೆ.
ನಾಗರಿಕ ಪರಮಾಣು ಸಹಕಾರ, ಸೌರ ಶಕ್ತಿ, ಬಾಹ್ಯಾಕಾಶ, ಸಹಕಾರ ಭಾರತೀಯ ರೈಲ್ವೆಗಾಗಿ ವಿದ್ಯುತ್ ಚಲನೆ, ತಂತ್ರಜ್ಞಾನ ವರ್ಗಾವಣೆ, ಸ್ಮಾಟ್ ಸಿಟಿ ಯೋಜನೆಗಳಿಗೆ ಮೆಟ್ರೋ ಮಾರ್ಗಗಳ ಸಂಪರ್ಕ ಸೇರಿದಂತೆ ಮಹತ್ವದ ಒಡಂಬಡಿಕೆಗಳಿಗೆ ಉಭಯ ದೇಶಗಳು ಅಂಕಿತ ಹಾಕಿವೆ.
ನಾಳೆ ಮೋದಿ ಮತ್ತು ಮ್ಯಾಕ್ರೋನ್ ಅಂತಾರಾಷ್ಟ್ರೀಯ ಸೌರ ಮೈತ್ರಿ (ಐಎಸ್ಎ) ಸಂಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಇದು ಸೌರ ಶಕ್ತಿ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.