ರಾಮನಗರ, ಮಾ.10- ಕಳೆದ ಒಂದು ತಿಂಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಇಟ್ಟಿದ್ದ ಬೋನಿಗೆ ಸೆರೆ ಸಿಕ್ಕಿದೆ.
ತಾಲೂಕಿನ ಮುತ್ತುರಾಯನಪಾಳ್ಯದ ಸುತ್ತಮುತ್ತ ಓಡಾಡುತ್ತಿದ್ದ ಚಿರತೆಯನ್ನು ಕಂಡು ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು.
ಜಮೀನು ಹತ್ತಿರ ಹೋಗಲು ರೈತರು ಹೆದರುತ್ತಿದ್ದರು. ಜಾನುವಾರುಗಳನ್ನು ಕೊಟ್ಟಿಗೆಯಿಂದ ಹೊರಗಡೆಯೂ ಸಹ ಬಿಡುತ್ತಿರಲಿಲ್ಲ. ಚಿರತೆಯಿಂದ ಕಂಗಾಲಾಗಿದ್ದ ಗ್ರಾಮಸ್ಥರು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿದ್ದು, ಐದು ದಿನಗಳ ಹಿಂದೆ ಭಾಸ್ಕರ್ ಎಂಬುವವರ ತೋಟದಲ್ಲಿ ಬೋನು ಇಡಲಾಗಿತ್ತು.
ರಾತ್ರಿ ಆಹಾರವನ್ನರಸಿ ಬಂದ ಚಿರತೆ ಕೊನೆಗೂ ಜೀವಂತವಾಗಿ ಸೆರೆ ಸಿಕ್ಕಿದೆ. ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಚಿರತೆಯನ್ನು ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.