ಹೈದರಾಬಾದ್:ಮಾ-10: ಒಮನ್ ನಲ್ಲಿ ತೊಂದರೆಗೆ ಸಿಲುಕಿದ್ದ ಹೈದರಾಬಾದ್ ಮೂಲದ ಮಹಿಳೆಯನ್ನು ಭಾರತೀಯ ರಾಯಭಾರ ಕಛೇರಿ ರಕ್ಷಣೆ ಮಾಡಿದ್ದು, ಮಹಿಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಭಾರತಿಯ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಒಮನ್ ನಲ್ಲಿ ಮೂರು ಮನೆಗಳಲ್ಲಿ ಮನೆಕೆಲಸ ಮಾಡಿಕೊಂಡಿದ್ದ ಹೈದಾರಾಬಾದ್ ಮೂಲದ ರೇಷ್ಮಾ ಎಂಬ ಮಹಿಳೆ ಮರಳಿ ಭಾರತಕ್ಕೆ ಬರಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.
ನಾನು ಮತ್ತು ನನ್ನ ಮಗಳು ನಿಲೌಫರ್ ಶೇಕ್ ಇಬ್ಬರೂ 2017ರ ಡಿಸೆಂಬರ್ 28ರಂದು ದುಬೈಗೆ ತೆರಳಿದ್ದೆವು. ದುಬೈನಲ್ಲಿ ಒಳ್ಳೆಯ ಕೆಲಸಗಳಿದ್ದು ತಿಂಗಳಿಗೆ ರೂ.20,000 ಸಂಪಾದನೆ ಮಾಡಬಹುದು ಎಂದು ಹೇಳಿ ಏಜೆಂಟ್ ಒಪ್ಪ ನಮ್ಮನ್ನು ದುಬೈಗೆ ಕರೆದುಕೊಂಡು ಹೋಗಿದ್ದ. ಬಳಿಕ ಕಚೇರಿಯೊಂದಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ ಅಲ್ಲಿ ನಮ್ಮನ್ನು ಇರಿಸಿದ್ದ. 10 ದಿನಗಳ ಬಳಿಕ ನನ್ನನ್ನು ಒಮನ್ ಗೆ ಕಳುಹಿಸಿದ್ದ. ಬಳಿಕ ಅಲ್ಲಿ ಮೂರು ಮನೆಗಳಲ್ಲಿ ಕೆಲಸ ಮಾಡಬೇಕಿತ್ತು. ಕೆಲಸ ಮಾಡಲು ನಿರಾಕರಿಸಿದಾಗ ನನ್ನನ್ನು ಎರಡು ದಿನಗಳ ಆಹಾರ, ನೀರು ನೀಡದೆ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದೆ.
ಇದೀಗ ರೇಷ್ಮಾ ಅವರನ್ನು ಭಾರತೀಯ ರಾಯಭಾರಿ ಕಚೇರಿ ರಕ್ಷಣೆ ಮಾಡಿದ್ದು, ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ರೇಷ್ಮಾ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೆ, ತಮ್ಮ ಮಗಳನ್ನು ರಕ್ಷಣೆ ಮಾಡುವಂತೆ ಸುಷ್ಮಾ ಸ್ವರಾಜ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.