ಬೆಂಗಳೂರು, ಮಾ.10- ಜೆಡಿಎಸ್ ಈಗಾಗಲೇ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿಸಿದ್ದು, ಈ ಅಭ್ಯರ್ಥಿಗೆ ಬೆಂಬಲ ನೀಡಬೇಕೆಂಬ ಅಭಿಪ್ರಾಯ ಕಾಂಗ್ರೆಸ್ ವಲಯದಿಂದ ಕೇಳಿಬಂದಿದೆ.
ಜಾತ್ಯತೀತ ಶಕ್ತಿಗಳೊಂದಿಗೆ ಕೈ ಜೋಡಿಸುವುದು ಸೂಕ್ತ. ಈ ಮೂಲಕ ನಾವು ಚುನಾವಣೆ ಸಂದರ್ಭದಲ್ಲಿ ಜಾತ್ಯತೀತ ಸಂದೇಶವನ್ನು ಜನರಿಗೆ ನೀಡಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ವರಿಷ್ಠರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕೇವಲ ಒಂದು ಸೀಟನ್ನು ಕಳೆದುಕೊಳ್ಳುವುದರಿಂದ ನಮಗೇನು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾದ ಅಗತ್ಯವಿದೆ. ಹೀಗಾಗಿ ಜೆಡಿಎಸ್ನೊಂದಿಗೆ ಕೈ ಜೋಡಿಸುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರನೆ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸುವ ನಿರ್ಧಾರ ಮಾಡಿದ್ದಾರೆ. ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಇಂದು ಸಂಜೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗುವ ಸಾಧ್ಯತೆ ಇದೆ. ಇಬ್ಬರನ್ನು ಕಾಂಗ್ರೆಸ್ ಸುಲಭವಾಗಿ ರಾಜ್ಯಸಭೆಗೆ ಆಯ್ಕೆ ಮಾಡಬಹುದು. ಮೂರನೆ ಅಭ್ಯರ್ಥಿಯನ್ನು ಪಕ್ಷೇತರರು ಹಾಗೂ ಇತರರ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆ ಮಾಡಬೇಕು.
ಜೆಡಿಎಸ್ ವತಿಯಿಂದ ಈಗಾಗಲೇ ಬಿ.ಎಂ.ಫಾರೂಕ್ ಅವರು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅವರನ್ನು ಬೆಂಬಲಿಸಬೇಕೆ ಅಥವಾ ಮೂರನೆ ಅಭ್ಯರ್ಥಿಯನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಬೇಕೆ ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ನಲ್ಲಿ ಚರ್ಚೆ ನಡೆದಿದೆ.
ಜಾತ್ಯತೀತ ಪಕ್ಷಗಳೊಂದಿಗೆ ಕೈ ಜೋಡಿಸಿ ಕೊಡು-ಕೊಳ್ಳುವಿಕೆಯನ್ನು ಮುಂದುವರಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹಲವು ಹಿರಿಯ ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಕಾಂಗ್ರೆಸ್ ಹೈಕಮಾಂಡ್, ಜೆಡಿಎಸ್ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ, ಯಾರು ಅಭ್ಯರ್ಥಿಗಳಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕು.