ಮೈಸೂರು, ಮಾ.10-ತವರು ಜಿಲ್ಲೆ ಮೈಸೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಿಗ್ಗೆಯಿಂದ ಸಂಜೆಯವರೆಗೂ ಸುಮಾರು 16 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಲ್ಲಿ ಬ್ಯುಸಿಯಾಗಿದ್ದರು.
ಚುನಾವಣಾ ದಿನಾಂಕ ಶೀಘ್ರ ಘೋಷಣೆಯಾಗುವ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ತಮ್ಮ ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು ಹತ್ತು ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ನಿನ್ನೆ ಜಿಲ್ಲೆಯ ಹಲವೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೆಲವು ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಈ ಪೈಕಿ ಅಪೂರ್ಣ ಕಾಮಗಾರಿಗಳ ಕಟ್ಟಡಗಳನ್ನು ಉದ್ಘಾಟಿಸಿರುವುದು ಕಂಡುಬಂತು.
ಇಂದು ಬೆಳಗ್ಗೆ ನಗರದ ಸರಸ್ವತಿಪುರಂ ಕುಕ್ಕರಹಳ್ಳಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ಮಿಸಿರುವ ಜಿಐಎಸ್ ಸಬ್ಸ್ಟೇಷನ್ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ನಂತರ ರಾಮಸ್ವಾಮಿ ವೃತ್ತಕ್ಕೆ ಆಗಮಿಸಿದ ಸಿದ್ದರಾಮಯ್ಯ, ಅಲ್ಲಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಲಲತಾದ್ರಿಪುರಕ್ಕೆ ತೆರಳಿ ಬಡಾವಣೆಯ ನಿವೇಶನಗಳ ಸಂಖ್ಯೆಯನ್ನು ಲಾಟರಿಗಳ ಮೂಲಕ ವಿತರಿಸಿದರು.
ಬಳಿಕ ಜರ್ಮನ್ ಪ್ರೆಸ್ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಧಿಕಾರಿಗಳ ಕಚೇರಿ ಸಂಕಿರ್ಣ ಹಾಗೂ ಇತರೆ ಕಾರ್ಯಕ್ರಮಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ತದನಂತರ ಈ ಸ್ಥಳದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದರು.
ಇದಾದನಂತರ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಇಲ್ಲಿಂದ ಗಾಂಧಿ ವಿಚಾರ ಪರಿಷತ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಈ ಎಲ್ಲ ಹತ್ತು ಹಲವು ಕಾರ್ಯಕ್ರಮಗಳ ನಂತರ ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಇತರರು ಮೈಸೂರುನಗರ ಪೆÇಲೀಸ್ ಆಯುಕ್ತರ ನೂತನ ಕಚೇರಿ, ರಾಜ್ಯ ಪೆÇಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ಹಾಗೂ ಒಳಾಂಗಣ ಫೈರಿಂಗ್ ರೇಂಜ್ ಮತ್ತು ಸ್ಪೋಟ್ರ್ಸ್ ಕ್ಲಬ್ನ ನೂತನ ಕಟ್ಟಡವನ್ನು ಸಂಜೆ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ಮೇಯರ್ ಭಾಗ್ಯವತಿ, ಗೃಹಸಚಿವರ ಸಲಹೆಗಾರ ಕೆಂಪಯ್ಯ, ಸಂಸದ ಧ್ರುವನಾರಾಯಣ್, ಶಾಸಕರಾದ ಸೋಮಶೇಖರ್, ವಾಸು ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ಮುಖ್ಯಮಂತ್ರಿ ಜೊತೆಯಲ್ಲಿದ್ದರು.