ಮೈಸೂರು,ಮಾ.10- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.
ನಗರದ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಒಕ್ಕಲಿಗ ಅಧಿಕಾರಿಗಳನ್ನು ಮುಖ್ಯಮಂತ್ರಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ನಾನೇನು ಅವರಿಂದ ಪಾಠ ಕಲಿಯಬೇಕಾಗಿಲ್ಲ ಎಂದರು.
ಲೋಕಾಯುಕ್ತರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಗೃಹಸಚಿವರೊಂದಿಗೆ ಮಾತನಾಡಿ, ಬೆಳೆವಣಿಗಳ ಬಗ್ಗೆ ತಿಳಿದು ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಮಾರ್ಚ್ 24 ಮತ್ತು 25ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮತ್ತೆ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಚಾಮರಾಜನಗರ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ 25ರಂದು ಸಂಜೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಆನೆ ದಾಳಿಯಿಂದ ಸಾವನ್ನಪ್ಪಿದ ಐಎಫ್ಎಸ್ ಅಧಿಕಾರಿ ಮಣಿಕಂದನ್ ಅವರ ಕುಟುಂಬಕ್ಕೆ ಪರಿಹಾರ ಕೊಡುವುದು ಹಾಗೂ ಕುಟುಂಬಸ್ಥರಲ್ಲಿ ಯಾರಿಗಾದರೂ ಉದ್ಯೋಗ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಈ ಕುರಿತು ಕುಟುಂಬ ಸದಸ್ಯರೊಂದಿಗೆ ಮಾತನಾಡುವುದಾಗಿ ತಿಳಿಸಿದರು. ನಗರದಲ್ಲಿ ವಿವಾದಿತ ಸ್ಥಳದಲ್ಲಿ ಪೆÇಲೀಸ್ ಆಯುಕ್ತರ ಕಚೇರಿ ನಿರ್ಮಾಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಈ ಜಾಗ ವಿವಾದದಲ್ಲಿರುವುದು ಗೊತ್ತಿಲ್ಲ. ಹೈಕೋರ್ಟ್ನಿಂದ ತಡೆಯಾಜ್ಞೆ ಇರುವ ಕಾಪಿ ನಿಮ್ಮ ಬಳಿ ಇದೆಯೇ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
ಈ ವೇಳೆ ಮಾಧ್ಯಮದವರು ದಾಖಲೆ ತೋರಿಸಲು ಮುಂದಾದಾಗ ಸಿದ್ದರಾಮಯ್ಯ ನಾನು ಕೂಡ ವಕೀಲನಾಗಿದ್ದವನು. ವಿವಾದಿತ ಸ್ಥಳವನ್ನು ಉದ್ಘಾಟಿಸಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲಾಗುವುದೇ ಎಂದು ಮಾರ್ಮಿಕವಾಗಿ ಮರುಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಹೊರಟ ಸಂದರ್ಭದಲ್ಲಿ ಪೌರಕಾರ್ಮಿಕರು ದಿಢೀರನೆ ಆಗಮಿಸಿ ರಸ್ತೆಯಲ್ಲಿ ಕುಳಿತು ಧರಣಿಗೆ ಮುಂದಾದ ಘಟನೆ ನಡೆಯಿತು. ತಮ್ಮ ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಕಾರಿಗೆ ಅಡ್ಡಿಪಡಿಸಿದರು. ಆಗ ಬೆಂಗಾವಲು ಪಡೆಯುವರು ಅವರನ್ನು ಹೊರಕಳುಹಿಸಿ ಸಿಎಂ ಕಾರು ಮುಂದೆ ಸಾಗಲು ಅನುವು ಮಾಡಿದರು.