ನವದೆಹಲಿ, ಮಾ.10-ಸೆಲ್ಫೀ ಗೀಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಬಾಲಕನೊಬ್ಬ ಪಿಸ್ತೂಲ್ ಜೊತೆ ಸೆಲ್ಫೀ ಕ್ಲಿಕ್ಕಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಸೋದರ ಸಂಬಂಧಿಯೊಬ್ಬ ಮೃತಪಟ್ಟ ಘಟನೆ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದೆ.
ಆಗ್ನೇಯ ದೆಹಲಿಯ ಶಹದಾರ ಪ್ರದೇಶದಲ್ಲಿ ನಿನ್ನೆ ಈ ದುರಂತ ಸಂಭವಿಸಿದ್ದು, ಪ್ರಶಾಂತ್ ಚೌಹಾಣ್(23) ಎಂಬ ಯುವಕ ಬಲಿಯಾಗಿದ್ದಾರೆ.
ಉತ್ತರಪ್ರದೇಶದ ಪಾಲಿ ಗ್ರಾಮದ ಪ್ರಶಾಂತ್ ಗುತ್ತಿಗೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ದೆಹಲಿಯ ಸರಿತಾ ವಿಹಾರದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ.
ಮನೆಯಲ್ಲಿ ಚಿಕ್ಕಪ್ಪನ ಮಗ, 11ನೇ ತರಗತಿ ವಿದ್ಯಾರ್ಥಿ ತಂದೆಯ ಪಿಸ್ತೂಲ್ ಹಿಡಿದು ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಆಕಸ್ಮಿಕವಾಗಿ ಹಾರಿದ ಗುಂಡು ಪ್ರಶಾಂತ್ಗೆ ಬಡಿಯಿತು. ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗೆ ಪ್ರಾಣಪಕ್ಷಿ ಹಾರಿಹೋಗಿತ್ತು.