ತುಮಕೂರು, ಮಾ.10- ಮರಿಯೊಂದಿಗೆ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಸ್ಥಳದಲ್ಲೇ ಸಾವನ್ನಪ್ಪಿ ತಾಯಿ ಚಿರತೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹೆಬ್ಬೂರು ಕುಣಿಗಲ್ ರಸ್ತೆಯ ವೈಕೆಆರ್ ವೃತ್ತದ ಬಳಿ ನಡೆದಿದೆ.
ಕಳೆದ ರಾತ್ರಿ ಚಿರತೆ ಹಾಗೂ ಚಿರತೆ ಮರಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮರಿ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಚಿರತೆ ನಿತ್ರಾಣಗೊಂಡು ರಸ್ತೆ ಬದಿಯಲ್ಲಿ ಒದ್ದಾಡುತ್ತಿತ್ತು.
ಇದನ್ನು ಗಮನಿಸಿದ ದಾರಿಹೋಕರು ಕೂಡಲೇ ಪೆÇಲೀಸರಿಗೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೆÇಲೀಸರು ಭೇಟಿ ನೀಡಿ ಗಾಯಗೊಂಡಿದ್ದ ಚಿರತೆಗೆ ವೈದ್ಯರನ್ನು ಕರೆಸಿ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.
ಮನಕಲಕುವ ದೃಶ್ಯ: ಚಿರತೆ ಕ್ರೂರ ಪ್ರಾಣಿಯಾದರೂ ಅದರ ತಾಯಿ ಪ್ರೀತಿ ಎಂತಹವರ ಮನ ಕಲಕುವಂತಿತ್ತು. ಮರಿ ಚಿರತೆಯನ್ನು ಕಳೆದುಕೊಂಡ ತಾಯಿ ಚಿರತೆ ತನ್ನದೇ ಆದ ಭಾಷೆಯಲ್ಲಿ ಅರಚುತ್ತಿತ್ತು. ಈ ದೃಶ್ಯ ಕಂಡ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಕಣ್ಣೀರು ತರಿಸಿತು.