ಜಿನಿವಾ:ಮಾ-10: ಉಗ್ರ ಹಫೀಜ್ ಸಯೀದ್ ಮೇಲೆ ವಿಶ್ವಸಂಸ್ಥೆಯೇ ನಿಷೇಧ ಹೇರಿದ್ದರೂ, ಇಂತಹ ಉಗ್ರನಿಗೆ ಪಾಕಿಸ್ತಾನ ಆಶ್ರಯ ನೀಡುವ ಮೂಲಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿಯಮ 1267ನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿದೆ ಎಂದು ಭಾರತ ಕಿಡಿಕಾರಿದೆ.
ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ 37ನೇ ಸಭೆಯಲ್ಲಿ ಮಾತನಾಡಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಭಾರತದ ಖಾಯಂ ಎರಡನೇ ಕಾರ್ಯದರ್ಶಿ ಮಿನಿ ದೇವಿ ಕುಮಾಮ್ ಅವರು, ಪಾಕ್ ತನ್ನ ದೇಶದ ಬೆಂಬಲದೊಂದಿಗೆ ಹಫೀಜ್ ತನ್ನ ಚಟುವಟಿಕೆಗಳನ್ನು ಮುಂದುವರೆಸುವಂತೆ ಮಾಡುತ್ತಿದೆ. ವಿಶ್ವಸಂಸ್ಥೆ ನಿಷೇಧ ಮಾಡಿರುವ ಉಗ್ರ ಸಂಘಟನೆಗಳು ಇಂದು ಪಾಕಿಸ್ತಾನದಲ್ಲಿ ರಾಜಕೀಯವಾಗಿ ಮುಖ್ಯವಾಹಿನಿಯಲ್ಲಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಅಂತರಾಷ್ಟ್ರೀಯ ಕಟ್ಟುಪಾಡುಗಳನ್ನು ಬಳಸಿಕೊಂಡು ಉಗ್ರರು ಬಹಿರಂಗವಾಗಿಯೇ ಹಣವನ್ನು ಗಳಿಸುತ್ತಿದ್ದಾರೆ. ಭಾರತದ ಗಡಿ ನುಸುಳುವ ಉಗ್ರರಿಗೆ ಪಾಕಿಸ್ತಾನ ಬೆಂಬಲವನ್ನು ನೀಡುತ್ತಿದೆ. 2008ರಲ್ಲಿ ಮುಂಬೈ ಮೇಲೆ ನಡೆದ ದಾಳಿ ಹಾಗೂ 2016ರ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ಹಾಗೂ ಉರಿ ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲಾ ಉಗ್ರರ ವಿರುದ್ಧ ಕೂಡಲೇ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆಂದು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಉಗ್ರರು ಬೀದಿ ಬೀದಿಗಳಲ್ಲಿ ತಲೆಎತ್ತಿ ಓಡಾಡುತ್ತಿದ್ದಾರೆ ಹೀಗಿರುವಾಗ ಪಾಕ್ ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಉಪನ್ಯಾಸ ನೀಡುತ್ತಿದೆ. ತಮ್ಮ ದೇಶದಲ್ಲಿಯೇ ಪರಿಸ್ಥಿತಿ ಕೆಟ್ಟದಾಗಿರುವಾಗ ಒಂದು ದೇಶದಿಂದ ಪ್ರಜಾಪ್ರಭುತ್ವ ಹಾಗೂ ಮಾನ ಹಕ್ಕುಗಳ ಬಗ್ಗೆ ವಿಶ್ವಾಕ್ಕೆ ಪಾಠದ ಅಗತ್ಯವಿಲ್ಲ ಎಂದಿದ್ದಾರೆ.
ಸಿಂಧ್, ಬಲೂಚಿಸ್ತಾನ ಮತ್ತು ಖೈಬರ್, ಪಖ್ತುಂಖ್ವಾದಲ್ಲಿರುವ ಜನರ ಮೇಲೆ ಪಾಕಿಸ್ತಾನ ದೌರ್ಜನ್ಯವೆಸಗುತ್ತಿದ್ದು, ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದೆ. ಈ ದೌರ್ಜನ್ಯಗಳನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪಾಕಿಸ್ತಾನಕ್ಕೆ ಸೂಚನೆ ನೀಡಬೇಕು ಎಂದು ಕುಮಾಮ್ ಆಗ್ರಹಿಸಿದ್ದಾರೆ.