ಕೆಂಗೇರಿ, ಮಾ.9- ಮಹಿಳಾ ಸಬಲೀಕರಣ, ಉನ್ನತಿಕರಣದ ಬಗ್ಗೆ ವೇದಿಕೆಗಳಲ್ಲಿ ಭಾಷಣಗಳಾಗುತ್ತಿವೆ, ರಾಜಕೀಯವಾಗಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲು ಇದುವರೆವಿಗೂ ಸಾಧ್ಯವಾಗಿಲ್ಲ ಎಂದು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವೆ ಡಾ.ಎಂ.ಸಿ.ಮೋಹನ್ ಕುಮಾರಿ ಬೇಸರ ವ್ಯಕ್ತಪಡಿಸಿದರು.
ಮೈಸೂರು-ಬೆಂಗಳೂರು ಮುಖ್ಯ ರಸ್ತೆಯ ರಾಜರಾಜೇಶ್ವರಿ ಸಮೂಹ ಸಂಸ್ಥೆಯ ಮಹಿಳಾ ಸಬಲೀಕರಣ ವಿಭಾಗ ಹಾಗೂ ಕರ್ನಾಟಕ ಕೈಗಾರಿಕ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ್ದು, ನಗರೀಕರಣ, ಜಾಗತಿಕರಣ, ಆಧುನೀಕರಣ ಮತ್ತು ಕೈಗಾರಿಕೆಕರಣ ಪರಿಣಾಮ ಕುಟುಂಬ ವ್ಯವಸ್ಥೆಯ ಸ್ವರೂಪ ಬದಲಾಗಿದ್ದು, ಮಹಿಳೆಯರು ದುಡಿಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದರು.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಕ್ರಾಂತಿಕಾರಕ ವಿಚಾರಧಾರೆಗಳು ಕೆಳವರ್ಗದ ಸಮುದಾಯಗಳಿಗೆ ಹಾಗೂ ಮಹಿಳೆಯರಿಗೆ ಅನುಭವ ಮಂಟಪದಲ್ಲಿ ಸಮಾನ ಅವಕಾಶಗಳನ್ನ ದೊರಕಿಸಿಕೊಡುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದ ವಿಚಾರಧಾರೆಗಳು ಮಾರ್ಗದರ್ಶಕ ದಿಕ್ಸೂಚಿಯಾಗಿ ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಮೂಕಾಂಬಿಕ ಚಾರಿಟೆಬಲ್ ಮತ್ತು ಎಜುಕೇಷನಲ್ ಟ್ರಸ್ಟ್ನ ಎಸ್.ಲಲಿತಾ ಲಕ್ಷ್ಮಿ, ರಾಜರಾಜೇಶ್ವರಿ ಕರ್ನಾಟಕ ಕೈಗಾರಿಕ ವಾಣಿಜ್ಯ ಮಂಡಳಿ ಅಧ್ಯಕ್ಷ ಆರ್.ಶಿವಕುಮಾರ್, ರಾಜರಾಜೇಶ್ವರಿ ಸಮೂಹ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಡಾ.ಎಸ್.ವಿಜಯಾನಂದ, ಶಿಕ್ಷಣ ಸಮೂಹ ಸಂಸ್ಥೆಯ ಡಾ.ಸತ್ಯಮೂರ್ತಿ.ಬಿ, ಡಾ.ಡಿ.ಎಲ್.ರಾಮಚಂದ್ರ, ಡಾ.ನವೀನ್ ಎಸ್. ಡಾ.ಉಷಾ ರಾಮಚಂದ್ರ, ಡಾ.ಎಸ್.ಸವಿತಾ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.