ಬೆಂಗಳೂರು,ಮಾ.9-ವಿದ್ಯಾರ್ಥಿ ನಿಲಯಗಳನ್ನು ಸುಧಾರಣೆ ಮಾಡದೆ ಕೇವಲ ಸುಳ್ಳು ಭರವಸೆಗಳನ್ನು ನೀಡುವ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹಣ ವಸೂಲಿ ಮಾಡುವ ಏಜೆಂಟ್‍ರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ವಾಗ್ದಾಳಿ ನಡೆಸಿದರು.
ವಿಜಯನಗರ ಕಾಸಿಯಾ ಭವನದಲ್ಲಿ ಇಂದು ರಾಜ್ಯಾದ್ಯಂತ ಬಿಜೆಪಿ ನಾಯಕರು ನಡೆಸಿದ ಸರ್ಕಾರಿ ಹಾಸ್ಟೆಲ್‍ಗಳ ಸ್ಥಿತಿಗತಿ ಕುರಿತ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಮಾತನಾಡಿದರು.
ರಾಜ್ಯದ ಅನೇಕ ಹಾಸ್ಟೆಲ್‍ಗಳು ರಾಜಕಾರಣಿಗಳಿಗೆ ಲೂಟಿ ಹೊಡೆಯುವ ತಾಣಗಳಾಗಿವೆ ಎಂಬ ಮಾತು ನಿಜವಾಗುತ್ತಿದೆ. ನಾವು ವಿದ್ಯಾರ್ಥಿನಿಲಯಗಳಿಗಾಗಿ 87 ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದು ಆಂಜನೇಯ ಹೇಳುತ್ತಾರೆ. ಹಾಸಿಗೆ, ದಿಂಬು, ಚಾಪೆ, ಬೆಡ್‍ಶೀಟ್ ಖರೀದಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಸರ್ಕಾರ ಹಾಗೂ ಮಧ್ಯವರ್ತಿಗಳ ನಡುವೆ ಇವರು ಏಜೆಂಟರಂತೆ ಕೆಲಸ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ನಡೆಯುತ್ತಿರುವ ಹಾಸ್ಟೆಲ್‍ಗಳಲ್ಲಿ ಕನಿಷ್ಟ ಪಕ್ಷ ಎರಡು ಸಾವಿರ ಕೋಟಿಗೂ ಹೆಚ್ಚು ಹಣ ಲೂಟಿಯಾಗಿದೆ. ರಾಜ್ಯದಲ್ಲಿ ಸರ್ಕಾರ ಬದಲಾಗದೆ ಈ ಸಮಸ್ಯೆಗೆ ಪರಿಹಾರವಿಲ್ಲ. ನಮ್ಮ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ ಸುಧಾರಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಸಣ್ಣ ಮಕ್ಕಳಿಗೆ ನೀಡಬೇಕಾದ ಬೆಡ್‍ಶೀಟ್, ದಿಂಬು ಖರೀದಿಯ 25 ಕೋಟಿ ವ್ಯವಹಾರದಲ್ಲೇ ಎಂಟು ಕೋಟಿಯಷ್ಟು ಭ್ರಷ್ಟಾಚಾರ ನಡೆಸಲಾಗಿದೆ. ಇನ್ನು 2157 ಕೋಟಿಯಲ್ಲಿ ಯಾರ್ಯಾರು ಎಷ್ಟೆಷ್ಟು ಹಣ ನುಂಗಿ ನೀರು ಕುಡಿದಿರಬಹುದು ಎಂದು ಡಿವಿಎಸ್ ಆಕ್ರೋಶ ವ್ಯಕ್ತಪಡಿಸಿದರು.
25 ಕೋಟಿಯಲ್ಲಿ 8 ಕೋಟಿ ಭ್ರಷ್ಟಾಚಾರ ಎಂದಾದರೆ ಅದು ಶೇ.32ರಷ್ಟಾಗುತ್ತದೆ. ಇದನ್ನು 2157 ಕೋಟಿಗೆ ಅನ್ವಯಿಸಿದರೆ 2015-16ರಲ್ಲಿ ಕೇವಲ ಒಂದು ಇಲಾಖೆಯ ಯೋಜನೆಗಳಲ್ಲೇ 690 ಕೋಟಿಯಷ್ಟು ಹಣವನ್ನು ಸ್ವಾಹ ಮಾಡಲಾಗಿದೆ. ಇದನ್ನು ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದರಿದ್ದಾರೆಯೇ ಎಂದು ಪ್ರಶ್ನಿಸಿದರು.
ನಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಶಾಸಕ ನರೇಂದ್ರ ಸ್ವಾಮಿ ಕೊಟ್ಟ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ತನಿಖೆ ನಡೆಸಲಿ. ತಾಕತ್ತಿದ್ದರೆ ಸಿದ್ದರಾಮಯ್ಯ ಇದನ್ನು ಮಾಡಲಿ ಎಂದು ಸವಾಲೆಸೆದರು.
ಇನ್ನು ನೀವು 15 ದಿನ ಮಾತ್ರ ಮುಖ್ಯಮಂತ್ರಿಗಳಾಗಿರುತ್ತೀರಿ. ಮುಂದೆ ರಾಜ್ಯದ ಜನತೆ ನಿಮ್ಮನ್ನು ಮೈಸೂರಿಗೆ ಕಳಿಸುವುದು ಶತಃಸಿದ್ಧ. ಒಂದೇ ಒಂದು ದಿನವೂ ಕೂಡ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಟ್ಟುಕೊಂಡಿಲ್ಲ ಎಂದು ವಾಗ್ದಾಳಿ ಮಾಡಿದರು.
ಕೇವಲ ಯೋಜನೆ ಘೋಷಣೆ ಮಾಡಿದರೆ ಪರಿಣಾಮವಾಗುವುದಿಲ್ಲ. ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆಯೇ ಎಂಬುದು ಮುಖ್ಯವಾಗುತ್ತದೆ. ಹಾಸ್ಟೆಲ್‍ನಲ್ಲಿ ಇರುವ ಮಕ್ಕಳನ್ನು ದೇವರೇ ಕಾಪಾಡಬೇಕು. ಬೆಡ್ಡು ಹಾಗೂ ಬೆಡ್‍ಶೀಟ್ ನೋಡಿದರೆ ಭಯವಾಗುತ್ತದೆ. ಟಾಯ್ಲೆಟ್ ಮೊಗ್ಗಲ್ಲಿ ನೀರು ಕುಡಿಯುತ್ತಾರೆ ಎಂದರೆ ಇನ್ನು ಪರಿಸ್ಥಿತಿ ಹೇಗಿರಬೇಕು ಎಂದು ಆತಂಕ ವ್ಯಕ್ತಪಡಿಸಿದರು.
ಹಾಸ್ಟೆಲ್‍ಗಳು ವಿದ್ಯಾರ್ಥಿಗಳ ಪಾಲಿಗೆ ನರಕವಾಗಿವೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಯನ್ನು ಟೆಂಡರ್ ಕರೆಯಬೇಕು. ಆದರೆ ನೂರಾರು ಕೋಟಿಗೆ ಟೆಂಡರ್‍ನ್ನು ಕರೆಯದೇ ಕಾನೂನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತದೆ. ಇದು ಯಾವ ಸೀಮೆಯ ಪಾರದರ್ಶಕ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡರು.
ಅನೇಕ ಹಾಸ್ಟೆಲ್‍ಗಳಲ್ಲಿ ಕುಡಿಯುವ ನೀರಿಗೆ ಬರ, ಗ್ರಂಥಾಲಯಗಳಿಲ್ಲ, ಕನ್ನಡಿಗರಿಗೆ ಅದ್ಯತೆಯಿಲ್ಲ, ಒಂದು ರೂಮ್‍ಗೆ 12 ವಿದ್ಯಾರ್ಥಿಗಳನ್ನು ತುಂಬಲಾಗಿದೆ. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ವಿಜಯ ಬ್ಯಾಂಕ್‍ಗೆ ದುಡ್ಡು ತುಂಬುವುದರಲ್ಲಿ ನಿರತರಾಗಿದ್ದಾರೆ. ಇದೊಂದು ಹಗಲು ದರೋಡೆ ಸರ್ಕಾರವಾಗಿದೆ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಸದಾನಂದಗೌಡರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಅನೇಕ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‍ಗಳಲ್ಲಿರುವ ಸಮಸ್ಯೆಗಳನ್ನು ಸಚಿವರಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.