ವಾಷಿಂಗ್ಟನ್: ಮಾ-9:ಅಮೆರಿಕ ಮೇಲೆ ಅಣ್ವಸ್ತ್ರ ದಾಳಿ ಮಾಡಿ, ವಿಶ್ವದ ಭೂಪಟದಿಂದಲೇ ಅದನ್ನು ಅಳಿಸಿಹಾಕುವುದಾಗಿ ಬೆದರಿಕೆ ಹಾಕಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರೊಂದಿಗೆ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಅಮೆರಿಕದ ಜತೆಗೆ ಮಾತುಕತೆ ನಡೆಸುವ ಉತ್ಸಾಹ ತೋರಿರುವ ಕಿಮ್ ದಕ್ಷಿಣ ಕೊರಿಯಾ ಜತೆಗೂ ಮುಂದಿನ ತಿಂಗಳು ಮಾತುಕತೆ ನಡೆಸುವ ಇರಾದೆಯನ್ನೂ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ಮಾತುಕತೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ನಿರ್ದೇಶಕ ಚುಂಗ್ ಎಯಿ-ಯಾಂಗ್ ಅವರು, ಶೃಂಗಸಭೆ ನಡೆಸಲು ಶ್ವೇತ ಭವನ ನಿರ್ಧರಿಸಿದ್ದು, ಸೋಮವಾರ ಉತ್ತರ ಕೊರಿಯಾದ ರಾಜಧಾನಿಯಲ್ಲಿ ಕಿಮ್ ಜಾಂಗ್ ಉನ್ ರೊಂದಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸೇರಿದಂತೆ ಇನ್ನಿತರೆ ಉನ್ನತಾಧಿಕಾರಿಗಳು ಮಾತುಕತೆ ನಡೆಸಲಿದ್ದಾರೆಂದು ಹೇಳಿದ್ದಾರೆ.
ಅಣ್ವಸ್ತ್ರಗಳ ನಾಶಕ್ಕೆ ಕಿಮ್ ಜಾಂಗ್ ಉನ್ ಬದ್ಧರಾಗಿದ್ದು, ಯಾವುದೇ ರೀತಿಯ ಪರಮಾಣು ಅಥವಾ ಕ್ಷಿಪಣಿ ಪರೀಕ್ಷೆಗಳಿಂದ ದೂರವಿರುವುದಾಗಿ ಕಿಮ್ ಜಾಂಗ್ ಉನ್ ವಾಗ್ದಾನ ಮಾಡಿದ್ದಾರೆಂದು ಟ್ರಂಪ್ ಅವರಿಗೆ ತಿಳಿಸಿದ್ದೇನೆ.
ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆಗಳಿಂದಾಗಿ ಉಲ್ಬಣಗೊಂಡ ಉದ್ವಿಗ್ನತೆಗಳ ಬಳಿಕ ಈ ಸಭೆ ನಡೆಯುತ್ತಿದ್ದು, ಬಹಳ ಮಹತ್ವವನ್ನು ಪಡೆದುಕೊಂಡಿದೆ. ಉತ್ತರ ಹಾಗೂ ದಕ್ಷಿಣ ಕೊರಿಯಾಗಳು ಏಪ್ರಿಲ್ ತಿಂಗಳ ಅಂತ್ಯದಲ್ಲಿ ಶೃಂಗಸಭೆ ನಡೆಸಲು ನಿರ್ಧರಿಸಿವೆ.
ಕಿಮ್ ಜಾಂಗ್ ಉನ್ ಅವರು ಟ್ರಂಪ್ ಅವರನ್ನು ಭೇಟಿ ಮಾಡಲು ಕಾತರದಿಂದ ಇದ್ದಾರೆ. ಟ್ರಂಪ್ ಅವರೂ ಕೂಡ ಕಿಮ್ ಜಾಂಗ್ ಉನ್ ಅವರನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದಾರೆಂದು ಚುಂಗ್ ಅವರು ಹೇಳಿದ್ದಾರೆ. ಆದರೆ, ಟ್ರಂಪ್ ಅವರು ಉತ್ತರ ಕೊರಿಯಾ ಸರ್ವಾಧಿಕಾರಿಯನ್ನು ಎಲ್ಲಿ ಭೇಟಿ ಮಾಡುತ್ತಾರೆಂಬ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
ಈ ಹಿಂದೆ ಎಂದಿಗೂ ಅಮೆರಿಕಾದ ಯಾವುದೇ ಅಧ್ಯಕ್ಷರು ಉತ್ತರ ಕೊರಿಯಾ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿರಲಿಲ್ಲ. ಆದರೆ, ಇದೀಗ ಟ್ರಂಪ್ ಅವರು ಮಾತುಕತೆಗೆ ಮುಂದಾಗಿದ್ದು, ಮಾತುಕತೆ ವೇಳೆ ಪಯೋಂಗ್ಯಾಂಗ್ ಪರಮಾಣು ಶಸ್ತ್ರಾಸ್ತ್ರಗಳ ಯೋಜನೆಗಳನ್ನು ಕೊನೆಗೊಳಿಸುವ ಕುರಿತು ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಅಮೆರಿಕ ಮೇಲೆ ಅಣ್ವಸ್ತ್ರ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ. ಉತ್ತರ ಕೊರಿಯಾ ಹಲವಾರು ಅಣ್ವಸ್ತ್ರಗಳ ಪರೀಕ್ಷೆಗಳನ್ನೂ ಮಾಡಿತ್ತು. ಇದು ಇಡೀ ವಿಶ್ವದ ರಾಷ್ಟ್ರಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಅಣ್ವಸ್ತ್ರದ ಬಟನ್ ನನ್ನ ಮೇಲಿನ ಮೇಲಿದೆ ಎಂದು ಕಿಮ್ ಸವಾಲಿ ಹಾಕಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಟ್ರಂಪ್ ಅವರು, ತಮ್ಮ ಬಳಿಯೂ ಅದಕ್ಕಿಂತ ದೊಡ್ಡ ಅಣ್ವಸ್ತ್ರದ ಬಟನ್ ಇದೆ. ಅದು ಕೆಲಸವನ್ನೂ ಮಾಡುತ್ತದೆ ಎಂದು ಹೇಳಿದ್ದರು.