ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಡಿ.ಎಂ.ಎಂ.ಪ್ರಕಾಶ್ ಅಧಿಕಾರ ದುರುಪಯೋಗ

ನೆಲಮಂಗಲ, ಮಾ.9- ಖಾಸಗಿ ವಾಹನಗಳ ಮೇಲೆ ನಂಬರ್ ಪ್ಲೇಟ್ ಬಿಟ್ಟು ಬೇರೇನೂ ಹಾಕಬಾರದೆಂಬ ಆದೇಶವಿದ್ದರೂ ತಮ್ಮ ಸ್ವಂತ ವಾಹನದ ಮೇಲೆ ಸರ್ಕಾರಿ ಲಾಂಛನ ಹಾಕಿ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಂಧಾದರ್ಬಾರ್ ನಡೆಸುತ್ತಿದ್ದಾರೆ.
ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಡಿ.ಎಂ.ಎಂ.ಪ್ರಕಾಶ್ ತಮ್ಮ ಸ್ವಂತ ವಾಹನಕ್ಕೂ ಸರ್ಕಾರಿ ಲಾಂಛನ ಹಾಕಿಕೊಂಡು ಒಂದೆಡೆ ಕಾನೂನು ಬಾಹೀರ ನಡೆ ಅನುಸರಿಸುತ್ತಿರುವುದಲ್ಲದೆ ಸರ್ಕಾರಿ ವಾಹನವೆಂಬಂತೆ ಬಿಂಬಿಸಿದ್ದಾರೆ.
ಸರ್ಕಾರಕ್ಕೂ ಇವರ ಸ್ವಂತ ವಾಹನಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ಲಾಂಛನ ಬಳಸುತ್ತಿರುವುದಲ್ಲದೇ ಯಾವುದೇ ಪ್ರಾಧಿಕಾರದ ಅಧ್ಯಕ್ಷರಿಗೆ ಇರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ಯೋಜನಾ ಪ್ರಾಧಿಕಾರದ ಅಧ್ಯಕ್ಷರಿಗೆ ಸ್ವಂತ ವಾಹನವಿದ್ದರೆ ಅದಕ್ಕೆ ತಿಂಗಳಿಗೆ 300 ಲೀಟರ್ ಡೀಸೆಲನ್ನು ಸರ್ಕಾರದಿಂದ ಒದಗಿಸಲಾಗುತ್ತದೆ. ಒಂದು ವೇಳೆ ಅವರ ಬಳಿ ಸ್ವಂತ ಕಾರಿಲ್ಲದಿದ್ದರೆ ಬಾಡಿಗೆಗೆ ವಾಹನ ಪಡೆದು ತಿಂಗಳಿಗೆ ಸರ್ಕಾರದಿಂದ ನೀಡುವ ಡೀಸಲ್ ಹಾಕಿ ತಮ್ಮ ಕೆಲಸ ಕಾರ್ಯಗಳಿಗೆ ಬಳಸಬೇಕಾಗಿದೆ. ಆದರೆ, ಪ್ರಕಾಶ್ ಅವರ ಬಳಿ ಅವರದ್ದೇ ಸ್ವಂತ ಫಾರ್ಚುನರ್ ಕಾರಿದ್ದು, ಅದಕ್ಕೆ ಸರ್ಕಾರದಿಂದ ಸಿಗುವ ಡೀಸಲ್ ಬಳಸುತ್ತಿರುವ ಜತೆಗೆ ಲಾಂಛನ ಬಳಸಿ ಸರ್ಕಾರಿ ವಾಹನದಂತೆ ಬಿಂಬಿಸಿ ಕಾನೂನು ಉಲ್ಲಂಘಿಸಿದ್ದಾರೆ.
ಇದರೊಂದಿಗೆ ಇವರ ಪಾರ್ಚುನರ್ ಕಾರು ಚಿಕ್ಕನಾಗಯ್ಯ ಹೆಸರಿನಲ್ಲಿದ್ದು, ಈ ವಾಹನದ ಮೇಲೆ 13 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿವೆ. ಈಗಾಗಲೇ ಇವರಿಗೆ ನೋಟಿಸ್ ಸಹ ಜಾರಿಯಾಗಿದೆ.
ಕಾರಿನ ಗಾಜುಗಳಿಗೆ ಕಪ್ಪು ಕೂಲಿಂಗ್ ಪೇಪರ್ ಅಳವಡಿಸಿರುವುದನ್ನು ತೆರವು ಮಾಡುವಂತೆ 4 ನೋಟಿಸ್ ನೀಡಲಾಗಿದ್ದು, ನೋ ಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡಿದ್ದಕ್ಕಾಗಿ 3 ಕೇಸ್ ಸೀಟ್, ಬೆಲ್ಟ್ ಹಾಕದೆ ವಾಹನ ಚಲಾವಣೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆ ಈ ಅಧಿಕಾರಿ ತಮ್ಮ ಅಧಿಕಾರ ವ್ಯಾಪ್ತಿಗೆ ಮೀರಿ ದರ್ಬಾರ್ ನಡೆಸುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದವರು ಕಣ್ಮುಚ್ಚಿ ಕುಳಿತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ