ಮೈಸೂರು, ಮಾ.9-ಹೊಸದಾಗಿ ರೂಪಿಸಿರುವ ಕನ್ನಡಧ್ವಜವನ್ನು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ಮತ್ತು ಕನ್ನಡ ರಾಜ್ಯೋತ್ಸವದಂದು ಬಳಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಜಿಲ್ಲಾ ಪ್ರವಾಸಕ್ಕಾಗಿ ಇಂದು ಆಗಮಿಸಿದ ಮುಖ್ಯಮಂತ್ರಿ ಪಿರಿಯಾಪಟ್ಟಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಡಧ್ವಜದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗಿದ್ದು, ಕೇಂದ್ರದ ಒಪ್ಪಿಗೆ ಕಳುಹಿಸಲಾಗಿದೆ. ರಾಷ್ಟ್ರಧ್ವಜದಂತೆ ಕನ್ನಡಧ್ವಜಕ್ಕೂ ತನ್ನದೇ ಆದ ಗೌರವವಿರುತ್ತದೆ. ಕೆಲವು ನೀತಿ ನಿಯಮಗಳನ್ನು ರೂಪಿಸಲಾಗುತ್ತದೆ. ಅದನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.
ನೋ ಕಾಮೆಂಟ್:
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿಯಿಂದ ತಡೆಯಾಜ್ಞೆಯಾಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ವರ್ಗಾವಣೆ ವಿಚಾರವನ್ನು ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ ನೋ ಕಾಮೆಂಟ್ ಎಂದರು.
ಮೈಸೂರು ವರುಣ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿಯವರ ವಿಕಾಸಪರ್ವ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಕಾಸಪರ್ವ ನಡೆಸಲಿ ತೊಂದರೆಯಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳು, ರ್ಯಾಲಿಗಳನ್ನು ಎಲ್ಲರೂ ಮಾಡಬಹುದು, ಆದ್ರೆ ಗೆಲ್ಲೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಕಳೆದ ಬಾರಿ ಕೂಡ ಕಾರ್ಯಕ್ರಮ, ರ್ಯಾಲಿ ಮಾಡಿದ್ದರು. ಆಗ ಎಷ್ಟು ಮತ ಗಳಿಸಿದ್ದರು ಎಂದು ಕೇಳಿದರು.
ಲೋಕಾಯುಕ್ತ ಸಂಸ್ಥೆಯನ್ನು ನಾಶಮಾಡಿದ್ದು, ಸಿದ್ದರಾಮಯ್ಯ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ನಾನು ಇದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ನಾಲ್ಕು ತಿಂಗಳಿಗೆ ಆಗವಷ್ಟು ನೀರು-ವಿದ್ಯುತ್ ಇದೆ:
ಸಿದ್ದರಾಮಯ್ಯ ಅವರೊಂದಿಗೆ ಇದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನಾಲ್ಕು ತಿಂಗಳಿಗೆ ಆಗುವಷ್ಟು ನೀರು, ವಿದ್ಯುತ್ ಸಂಗ್ರಹವಿದೆ. ಹಾಗಾಗಿ ಏನೂ ತೊಂದರೆ ಇಲ್ಲ ಎಂದು ತಿಳಿಸಿದರು.
ಶಿಕ್ಷಣ, ಗ್ರಾಹಕರು, ಕೈಗಾರಿಕೆ ಅಗತ್ಯವಾಗುವಷ್ಟು ವಿದ್ಯುತ್ ಇದೆ. ಪಾವಗಡದ ಸೋಲಾರ್ ಪಾರ್ಕ್ನಿಂದ ಈಗಾಗಲೇ 600 ಮೆಗಾ ವ್ಯಾಟ್ ವಿದ್ಯುತ್ತನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಮತ್ತಿತರರು ಹಾಜರಿದ್ದರು.