ಬಿಜೆಪಿ ತಂತ್ರಗಾರಿಕೆಗೆ ಪ್ರತಿತಂತ್ರಗಾರಿಕೆ ನಮ್ಮ ಬಳಿಯಿದೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್
ಬೆಂಗಳೂರು, ಮಾ.9-ಬಿಜೆಪಿ ಏನೇ ತಂತ್ರಗಾರಿಕೆ ರೂಪಿಸಿದರೂ ಅದಕ್ಕೆ ಪ್ರತಿತಂತ್ರಗಾರಿಕೆ ರೂಪಿಸುವ ತಾಕತ್ತು ನಮಗಿದೆ. ಯಾರು ಅಧೀರರಾಗಬೇಕಾಗಿಲ್ಲ. ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮುಖಂಡರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರ ಎಲ್ಲಾ ತಂತ್ರಗಾರಿಕೆಗಳಿಗೂ ನಮ್ಮಲ್ಲಿ ಉತ್ತರವಿದೆ. ಯಾರೂ ಭಯಪಡುವ ಅಗತ್ಯವಿಲ್ಲ. ನಾವು ಸಾಕಷ್ಟು ಚುನಾವಣಾ ತಂತ್ರಗಳನ್ನು ಮಾಡಿದ್ದೇವೆ. ಬಿಜೆಪಿಯವರ ತರಹ ಹೇಳಿಕೊಳ್ಳುವುದಿಲ್ಲ. ಕಾರ್ಯಕರ್ತರು, ಮುಖಂಡರು ಅತಿಯಾದ ಆತ್ಮವಿಶ್ವಾಸ ಹೊಂದಬೇಡಿ ರಣಭೂಮಿಯಲ್ಲಿ ಇಳಿದು ಕೆಲಸ ಮಾಡಿ ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಗೆಲ್ಲುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. 2019ರ ಚುನಾವಣೆಗೆ ಈ ಗೆಲುವು ದಿಕ್ಸೂಚಿಯಾಗುತ್ತದೆ. ಕರ್ನಾಟಕ ಚುನಾವಣೆ ಇಡೀ ರಾಷ್ಟ್ರದ ಗಮನವನ್ನು ಸೆಳೆದಿದೆ. ಎಲ್ಲಾ ಪಕ್ಷದ ರಾಷ್ಟ್ರೀಯ ಮುಖಂಡರು ಈ ಚುನಾವಣೆಯನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಹಾಗಾಗಿ ನಾವೆಲ್ಲ ಇದನ್ನು ಗಂಭೀರವಾಗಿ ಪರಿಗಣಿಸಿ ಗೆಲುವು ಸಾಧಿಸಬೇಕು ಎಂದು ವೇಣುಗೋಪಾಲ್ ತಿಳಿಸಿದರು.
ರಾಹುಲ್ಗಾಂಧಿ ನೇತೃತ್ವದಲ್ಲಿ ಮುಂಬೈ-ಕರ್ನಾಟಕ, ಹೈದರಾಬಾದ್-ಕರ್ನಾಟಕ ಭಾಗದಲ್ಲಿ ನಡೆದ ಜನಾಶೀರ್ವಾದ ಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಕಾರ್ಯಕರ್ತರ ಶ್ರಮಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪ್ರತಿಕ್ಷೇತ್ರಕ್ಕೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಹುತೇಕ ಕಡೆ ಪದಾಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಇವರ ಮೌಲ್ಯಮಾಪನವಾಗುತ್ತದೆ.
ನಗರದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗಿದೆ ಎಂಬ ಮಾಹಿತಿ ಇದೆ. ಪಕ್ಷವನ್ನು ಸದೃಢಗೊಳಿಸಿ ಚುನಾವಣೆ ಗೆಲ್ಲಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಏಪ್ರಿಲ್ನಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಎರಡು ತಿಂಗಳ ಕಾಲ ಯುದ್ಧಭೂಮಿಯಲ್ಲಿ ಇರಬೇಕು. ಚುನಾವಣೆಯಲ್ಲಿ ಸೋತರೆ ಐದು ವರ್ಷಗಳ ಕಾಲ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಚ್ಚರ. ಎಲ್ಲಾ ಅಸಮಾಧಾನ, ಭಿನ್ನಾಭಿಪ್ರಾಯ ಮರೆತು, ಆಂತರಿಕ ಕಲಹಗಳನ್ನು ಬದಿಗೊತ್ತಿ ಕೆಲಸ ಮಾಡಬೇಕು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಕರ್ನಾಟಕ ಚುನಾವಣೆ ಗೆಲುವು ನಮಗೆ ಅತ್ಯಂತ ಅನಿವಾರ್ಯವಾಗಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷದ ಬಗ್ಗೆ ನಮ್ಮ ವರಿಷ್ಠರು ಅಪಾರ ವಿಶ್ವಾಸವಿಟ್ಟುಕೊಂಡಿದ್ದಾರೆ, ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಉತ್ತಮ ಫಲಿತಾಂಶ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕು. ಪ್ರತಿ ಬೂತ್ಮಟ್ಟದಿಂದ ವರದಿಯನ್ನು ತರಿಸಿಕೊಳ್ಳಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ, ಅಭ್ಯರ್ಥಿಗಳ ಮಾಹಿತಿ ಪಡೆಯುತ್ತಿದ್ದೇವೆ.
ಮುಖಂಡರು ಆಕಾಂಕ್ಷಿಗಳು ಬಹಿರಂಗ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುವುದು ಬೇಡ. ಪಕ್ಷದ ವೇದಿಕೆಗಳಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಪರಮೇಶ್ವರ್ ಸಲಹೆ ಮಾಡಿದರು.
ಎಐಸಿಸಿ ನಾಲ್ವರು ಕಾರ್ಯದರ್ಶಿಗಳು, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್, ಮುಖಂಡರಾದ ವಿ.ಆರ್.ಸುದರ್ಶನ್, ಬಿ.ಎಲ್.ಶಂಕರ್, ವೀರಣ್ಣ ಮತ್ತಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.