ಬೆಂಗಳೂರು, ಮಾ 9: ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಅಲೆಯನ್ನು ಎಬ್ಬಿಸಲು ಹೈದರಾಬಾದ್ ಮೂಲದ ಹೀರಾ ಗ್ರೂಪಿನ ಸ್ಥಾಪಕರಾದ ಡಾ. ನೌವೆರಾ ಶೇಕ್ ರವರ ಮಹಿಳಾ ಸಬಲೀಕರಣ ಪಕ್ಷ ( ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ) ತನ್ನ ಯೋಜನೆಗಳನ್ನು ಇಂದು ಪ್ರಕಟಿಸಿದೆ
ಮಾಧ್ಯಮಗಳನ್ನು ಉದ್ದೇಶಿಸಿ ಅವರು ರಾಜ್ಯದ ಎಲ್ಲ 224 ವಿಧಾನ ಸಭೆ ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಯೋಜನೆಯನ್ನು ಹಾಗು 150 ಕ್ಷೇತ್ರಗಳ್ಳಲ್ಲಿ ಜಯವನ್ನು ಗಳಿಸುವ ಆಸಕ್ತಿಯನ್ನು ತೋರಿಸಿದರು. ಚುನಾವಣೆಯಲ್ಲಿ ಬ್ರಾಂಡ್ ಜಾಗೃತಿ ಕಡೆಗೆ ವೆಚ್ಚ ಮಾಡುವುದಲ್ಲದೆ ಹಣವನ್ನು ಮತಗಳ ಖರೀದಿಗೆ ಬಳಸುವುದಿಲ್ಲ ಎಂದರು. ಈ 224 ಕ್ಷೇತ್ರಗಳಲ್ಲಿ 40% ಮಹಿಳೆಯರಿಗೆ ಟಿಕೆಟ್ ಕೊಡುವುದು ಎಂದು ಹೇಳಿದರು. ಪುರುಷ ಅಭ್ಯರ್ಥಿಗಳಲ್ಲಿ ಯಾರು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವವರೋ ಅವರಿಗೆ ಪ್ರಾಮುಖ್ಯತೆ ಕೊಡಲಾಗುವುದು ಎಂದರು. ಎಲ್ಲಾ ಸಮುದಾಯಗಳಿಗೆ ಟಿಕೆಟ್ಗಳನ್ನು ವಿತರಿಸಲಾಗುತ್ತದೆ.
ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸಲು ಮತ್ತು ಧ್ವನಿ ಸಂಪಾದಿಸುವ ಖಾತ್ರಿ ಮಾಡಿಕೊಳ್ಳುವತ್ತ ಪಕ್ಷ ಗಮನ ಕೇಂದ್ರೀಕರಿಸಿದೆ. ಡಾ. ಶೇಕ್ ಅವರು ಮಾತನಾಡಿ, “ಕರ್ನಾಟಕ ವಿಧಾನಸಭೆ ಚುನಾವಣೆಗಳು ಸಿದ್ಧತೆಗೆ ನೆರವಾಗಲಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ನಮ್ಮ ಛಾಪು ಮೂಡಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ” ಎಂದರು.
“ಕೇವಲ ಮತ್ತೊಂದು ಪಕ್ಷ ಎಂಬ ಪರಿಗಣನೆಗೆ ಗುರಿಯಾಗದೆ ಗುಂಪಿನಲ್ಲಿ ಪ್ರತ್ಯೇಕ ಸ್ಥಾನ ಹೊಂದುವ ಇಚ್ಛೆಯನ್ನು ಪಕ್ಷ ಹೊಂದಿದೆ. ಪರಿಶುದ್ಧವಾದ ರಾಜಕೀಯ ಮತ್ತು ಆಡಳಿತದ ಪರ ನಾವಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಕ್ಕೂ ಮೊದಲಾಗಿ ತಮ್ಮ ಕ್ಷೇತ್ರಗಳಲ್ಲಿ ಸಮಾಜಕ್ಕೆ ಸ್ವಾರ್ಥರಹಿತ ಸೇವೆಯಿಂದ ಹೆಸರಾಗಿರುವವರು ಮತ್ತು ಪರಿಶುದ್ಧವಾದ ದಾಖಲೆ ಹೊಂದಿರುವವರಿಗೆ ಟಿಕೆಟ್‍ಗಳನ್ನು ನೀಡುವ ಖಾತ್ರಿಯನ್ನು ನಾವು ಮಾಡಿಕೊಳ್ಳಲಿದ್ದೇವೆ” ಎಂದರು.
ಪಕ್ಷವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ. ಅದು ಅಲ್ಲದೆ ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ, ಸಾರಿಗೆ, ಉದ್ಯೋಗ, ಯುವ ಜನತೆ ಮತ್ತು ಮಹಿಳಾ ಸುರಕ್ಷತೆ ಕಡೆಗೆ ಗಮನ ಕೊಡುತ್ತೇವೆ ಎಂದು ಹೇಳಿದರು.
ಶೇಕ್ ರವರು ಈಗಾಗಲೇ 13 ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದು ಉಳಿದ 17 ಜಿಲ್ಲೆಗಳಲ್ಲಿ ಶೀಘ್ರದಲ್ಲಿ ಪ್ರಚಾರ ಪೂರ್ಣಗೊಳಿಸುವರು. ದಿನಾಂಕ 10 ಮಾರ್ಚ್ ರಂದು ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ ಪೂರ್ಣ ದಿನದ ಕಾರ್ಯಕ್ರಮ ಮತ್ತು ಸಮಾವೇಶ ನಡಿಯುವುದು ಎಂದರು.