ಲಖನೌ:ಮಾ-9: ದೇಶಾದ್ಯಂತ ಪ್ರತಿಮೆ ವಿಧ್ವಂಸ ಮುಂದುವರೆದಿದ್ದು ಇದೀಗ ಆಂಜನೇಯ ಸ್ವಾಮಿ ವಿಗ್ರಹವನ್ನೂ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಉತ್ತರ ಪ್ರದೇಶದ ಖರುಯಾವ್ ಎಂಬ ಹೋಬಳಿಯಲ್ಲಿ ಆಂಜನೇಯ ದೇವರ ಪ್ರತಿಮೆಯೊಂದನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ನಗ್ರಾ ಹಳ್ಳಿಯ ಸ್ಟೇಷನ್ ಹೌಸ್ ಅಧಿಕಾರಿ ರಾಮ್ ದಿನೇಶ್ ತಿವಾರಿ, ಹನುಮಾನ್ ವಿಗ್ರಹ ಧ್ವಂಸ ಮಾಡಲಾಗಿದೆ. ಈ ಬಗ್ಗೆ ದುಷ್ಯಂತ್ ಸಿಂಗ್ ಎಂಬುವರು ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗಿದ್ದು, ಯಾರನ್ನೂ ಬಂಧಿಸಲಾಗಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶದ ಮೀರತ್ನಲ್ಲಿ ಬುಧವಾರ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿದ್ದನ್ನು ಖಂಡಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ, ಸಿಎಂ ಯೋಗಿ ಆದಿತ್ಯನಾಥ್, ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಇಂಥ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ. ಇದಕ್ಕೂ ಮೊದಲು ಸೋಮವಾರ ತ್ರಿಪುರಾದಲ್ಲಿ ಕಮ್ಯೂನಿಸ್ಟ್ ನಾಯಕ ಲೆನಿನ್ ಅವರ ಎರಡು ಪ್ರತಿಮೆಗಳು ಧ್ವಂಸಗೊಂಡ ನಂತರ, ತಮಿಳುನಾಡಿನಲ್ಲಿ ಸಾಮಾಜಿಕ ಹೋರಾಟಗಾರ ಪೆರಿಯಾರ್, ಕೋಲ್ಕತಾದಲ್ಲಿ ಜನ ಸಂಘ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಹಾಗೂ ಮೀರತ್ನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಂಡಿದ್ದವು.
ಅಲ್ಲದೇ ಕೇರಳದ ಕಣ್ಣೂರು ಜಿಲ್ಲೆಯ ತಲಿಪಾರಂಬ ಪಟ್ಟಮದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪ ಗೊಳಿಸಿದ್ದರು.
After statues of icons, Lord Hanuman’s idol, targeted by miscreants