ಮಾಲಿನ್ಯ ಮತ್ತು ಸಂಚಾರ ಒತ್ತಡ ನಿಯಂತ್ರಣಕ್ಕಾಗಿ ಕರ್ನಾಟಕ ವಿದ್ಯುತ್ ವಾಹನಗಳು ಮತ್ತು ಇಂಧನ ಸಂಗ್ರಹ ನೀತಿ-2017 ಜಾರಿಯಾಗಿದೆ: ಎಚ್.ಎಂ.ರೇವಣ್ಣ

ಬೆಂಗಳೂರು, ಮಾ.9- ನಗರದಲ್ಲಿ ವಾಯು- ಶಬ್ದ ಮಾಲಿನ್ಯ ಮತ್ತು ಸಂಚಾರ ಒತ್ತಡ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ 22ನೆ ದಕ್ಷಿಣ ಭಾರತ ಸಾರಿಗೆ ಸಚಿವರ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಾಲಿನ್ಯ ಮತ್ತು ಸಂಚಾರ ಒತ್ತಡ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಕರ್ನಾಟಕ ವಿದ್ಯುತ್ ವಾಹನಗಳು ಮತ್ತು ಇಂಧನ ಸಂಗ್ರಹ ನೀತಿ-2017 ಜಾರಿಗೊಳಿಸಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ನಗರದಲ್ಲಿ 150 ಪರಿಸರ ಸ್ನೇಹಿ ವಿದ್ಯುತ್ ಬಸ್‍ಗಳನ್ನು ಪರಿಚಯಿಸಲಾಗಿದೆ. ಬಿಎಂಟಿಸಿ ಬಸ್‍ಗಳಲ್ಲಿ ಮಹಿಳೆಯರಿಗೆ ಸೂಕ್ತ ಆಸನಗಳನ್ನು ಮೀಸಲಿಡಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇಂದಿರಾ ಸಾರಿಗೆಯಿಂದ ಉದ್ಯೋಗಸ್ಥ ಮಹಿಳೆಯರ ಬಸ್ ಪ್ರಯಾಣ ದರದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದೆ. ಬಜೆಟ್‍ನಲ್ಲಿ ಪ್ರತಿವರ್ಷ 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಘೋಷಿಸಲಾಗಿದೆ. ಇದು ದೇಶದಲ್ಲೇ ಪ್ರಪ್ರಥಮ ಎಂದು ರೇವಣ್ಣ ಹೇಳಿದರು.
ಸಾರಿಗೆ ಇಲಾಖೆಯು ನಿಲುಗಡೆ ರಹಿತ ಇಂಟರ್‍ಸಿಟಿ ಫ್ಲೈ ಬಸ್ ಸೇವೆಗಳನ್ನು ಆರಂಭಿಸಿದೆ ಎಂದು ಅವರು ತಿಳಿಸಿದರು.
ಕೇರಳ ಸಾರಿಗೆ ಸಚಿವ ಎ.ಕೆ.ಶಶಿಧರನ್, ತಮಿಳುನಾಡಿನ ಸಾರಿಗೆ ಮಂತ್ರಿ ಎಂ.ಆರ್.ವಿಜಯಭಾಸ್ಕರ್, ಗೋವಾದ ರಾಮಕೃಷ್ಣ ಎಸ್. ದಾವೀಳ್ಕರ್ ಹಾಗೂ ಸಾರಿಗೆ ಇಲಾಖೆಗಳ ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ