ನವದೆಹಲಿ: ತ್ರಿಪುರಾದಲ್ಲಿ ಲೆನಿನ್, ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆ ಧ್ವಂಸ ಬಳಿಕ ಪಶ್ಚಿಮ ಬಂಗಾಳದ ಕೊಲ್ಕೊತ್ತಾದ ಕಾಳಿಘಾಟ್ನಲ್ಲಿ ಜನಸಂಘದ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಜಾಧವಪುರ ವಿವಿ ವಿದ್ಯಾರ್ಥಿಗಳಿಂದ ಮುಖರ್ಜಿ ಪ್ರತಿಮೆಗೆ ಹಾನಿಯಾಗಿದೆ ಎಂದು ವರದಿಯಾಗಿದ್ದು, ಕಳಿಂಗ ಪೊಲೀಸ್ ಠಾಣಾ ವ್ಯಾಪ್ತಿಯ ರುದ್ರಭೂಮಿಯಲ್ಲಿ ಈ ಘಟನೆ ನಡೆದಿದೆ. ಪ್ರತಿಮೆಗೆ ಭಾಗಶಃ ಹಾನಿಗೊಳಿಸಿದ ನಂತರ ಮಸಿ ಬಳಿಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.
ಕಠಿಣ ಕ್ರಮಕ್ಕೆ ಮೋದಿ ಸೂಚನೆ
ಈ ನಡುವೆ ದೇಶದಲ್ಲಿ ಪ್ರತಿಮೆ ಧ್ವಂಸ ಪ್ರಕರಣಗಳ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಗೃಹ ಸಚಿವಾಲಯ ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿದ್ದು, ಪ್ರತಿಮೆ ಧ್ವಂಸ ಪ್ರಕರಣಗಳನ್ನು ಬಲವಾಗಿ ಖಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಿಗೂ ಪ್ರತಿಮೆಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವಾಲಯ ಸೂಚಿಸಿದೆ. ಅಲ್ಲದೇ, ಧ್ವಂಸ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕಠಿಣವಾದ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ನಿರ್ದೇಶಿಸಿದೆ.
ಪೆರಿಯಾರ್ ಪ್ರತಿಮೆ ಧ್ವಂಸಗೊಳಿಸುವ ಹೇಳಿಕೆಯನ್ನು ನನ್ನ ಫೇಸ್ಬುಕ್ನ ಒಬ್ಬ ಅಡ್ಮಿನ್, ನನ್ನ ಅನುಮತಿ ಇಲ್ಲದೇ ಪೋಸ್ಟ್ ಮಾಡಿದ್ದಾರೆ ಎಂದು ತಮಿಳುನಾಡಿನ ಬಿಜೆಪಿ ನಾಯಕ ಎಚ್ ರಾಜಾ ಹೇಳಿದ್ದಾರೆ. ಈ ವಿಷಯ ನನಗೆ ತಿಳಿದ ತಕ್ಷಣ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದೇನೆ. ನಾವು ಹೇಳಿಕೆಗಳ ಮೂಲಕ ಪ್ರತಿಕ್ರಿಯಿಸಬೇಕೇ ಹೊರತು, ಹಿಂಸಾಚಾರದಿಂದಲ್ಲ ಎಂದಿದ್ದಾರೆ. ಅಲ್ಲದೇ, ಪೆರಿಯಾರ್ ಪ್ರತಿಮೆಯನ್ನು ವಿರೂಪಗೊಳಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಸಾಬೀತಾದರೆ ಶಿಸ್ತು ಕ್ರಮ: ಬಿಜೆಪಿ
ಪ್ರತಿಮೆಗಳನ್ನು ಧ್ವಂಸ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್, ಘಟನೆಯಲ್ಲಿ ಬಿಜೆಪಿ ಮುಖಂಡರು ಅಥವಾ ಕಾರ್ಯಕರ್ತರು ಪಾಲ್ಗೊಂಡಿರುವುದು ಸಾಬೀತಾದರೆ ಕಠಿಣ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದೆ.