ನವದೆಹಲಿ:ಮಾ-8: ದೇಶದ ವಿವಿಧ ರಾಜ್ಯಗಳಲ್ಲಿ ಐತಿಹಾಸಿಕ ವ್ಯಕ್ತಿಗಳ ಪ್ರತಿಮೆ ಧ್ವಂಸ ಪ್ರಕರಣಗಳು ಮುಂದುವರೆದಿದ್ದು, ಕೇರಳ ಕಣ್ಣೂರು ಜಿಲ್ಲೆಯ ತಾಳಿಪರಂಬ ದಲ್ಲಿ ತಾಲೂಕು ಕಚೇರಿಯ ಮುಂದಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಮಾಡಿದ್ದಾರೆ.
ದುಷ್ಕರ್ಮಿಗಳು ಗಾಂಧಿ ಪ್ರತಿಮೆಯ ಕನ್ನಡಕವನ್ನು ಮುರಿದಿದ್ದಾರೆ; ಹೂಮಾಲೆಯನ್ನು ನಾಶ ಮಾಡಿದ್ದಾರೆ ಮತ್ತು ಪ್ರತಿಮೆಗೆ ಕಲ್ಲೆಸೆದು ಹಾನಿ ಉಂಟುಮಾಡಿದ್ದಾರೆ. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ತ್ರಿಪುರದಲ್ಲಿ ಕಳೆದವಾರ ಲೆನಿನ್ ಪ್ರತಿಮೆಯನ್ನು ಧ್ವಂಸಮಾಡಿದ್ದರು. ತ್ರಿಪುರಾ ದಾಳಿ ಬೆನ್ನಲ್ಲೇ ತಮಿಳುನಾಡಿನಲ್ಲಿ ಪೆರಿಯಾರ್ ಪುತ್ಖಳಿ ಮೇಲೆ ದಾಳಿ ಮಾಡಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ನಿನ್ನೆ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪ್ರತಿಮೆಗೆ ದುಷ್ಕರ್ಮಿಗಳು ಹಾನಿ ಮಾಡಿದ್ದರು. ಈ ನಡುವೆ ತಮಿಳುನಾಡಿನ ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ.
ತಡರಾತ್ರಿ ಉತ್ತರ ಪ್ರದೇಶದ ಮೀರತ್ ನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಹಾನಿಗೊಳಿಸಲಾಗಿದ್ದರೆ ಇತ್ತ ತಮಿಳುನಾಡಿನ ರಾಜಧಾನಿ ಚೆನ್ನೈನ ತಿರುವೊತ್ತಿಯೂರ್ ಪ್ರದೇಶದಲ್ಲಿ ಕೂಡ ಅಂಬೇಡ್ಕರ್ ಪ್ರತಿಮೆ ಮೇಲೆ ದಾಳಿ ನಡೆಸಲಾಗಿದೆ. ಇಲ್ಲಿನ ಅಂಬೇಡ್ಕರ್ ಪ್ರತಿಮೆಗೆ ದುಷ್ಕರ್ಮಿಗಳು ಪೇಯಿಂಟ್ ಸುರಿದು ವಿರೂಪಗೊಳಿಸಿದ್ದಾರೆ.