ಬೀದಿ ದೀಪಗಳನ್ನು ಎಲ್ಇಡಿಗೆ ಪರಿವರ್ತನೆ ಟೆಂಡರ್ನಲ್ಲಿ ಎಸ್ಸಿ/ಎಸ್ಟಿ ಗುತ್ತಿಗೆದಾರರಿಗೆ ಶೇ.25ರಷ್ಟು ಮೀಸಲಾತಿ ಸಾಧ್ಯವಿಲ್ಲ: ಪಾಲಿಕೆ ಆಯುಕ್ತರ ಸ್ಪಷ್ಟನೆ
ಬೆಂಗಳೂರು, ಮಾ.8- ನಗರದಲ್ಲಿ ಬೀದಿ ದೀಪಗಳನ್ನು ಎಲ್ಇಡಿಗೆ ಪರಿವರ್ತನೆ ಮಾಡಲು ಟೆಂಡರ್ನಲ್ಲಿ ಎಸ್ಸಿ/ಎಸ್ಟಿ ಗುತ್ತಿಗೆದಾರರಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂದು ಆಯುಕ್ತ ಮಂಜುನಾಥ ಪ್ರಸಾದ್ ಪಾಲಿಕೆ ಸಭೆಯಲ್ಲಿಂದು ಸ್ಪಷ್ಟನೆ ನೀಡಿದರು.
ಬಜೆಟ್ ಮೇಲಿನ ಮುಂದುವರೆದ ಚರ್ಚೆ ಸಂದರ್ಭದಲ್ಲಿ ಶಾಸಕ ಕೆ.ಗೋಪಾಲಯ್ಯ ಅವರು ಎಲ್ಇಡಿ ಅಳವಡಿಕೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಶೇ.25ರಷ್ಟು ಮೀಸಲಾತಿ ಏಕೆ ಕೊಡುತ್ತಿಲ್ಲ ಎಂದು ಪ್ರಶಿಸಿದರು.
ಶಾಸಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಂಜುನಾಥ್ ಪ್ರಸಾದ್ ಬೀದಿ ದೀಪ ವ್ಯವಸ್ಥೆಯನ್ನು ಎಲ್ಇಡಿಗೆ ಪರಿವರ್ತಿಸುವುದರಿಂದ ಪ್ರತಿ ತಿಂಗಳು ವೆಚ್ಚವಾಗುತ್ತಿದ್ದ ಬಿಲ್ 12 ಕೋಟಿಯಿಂದ 6 ಕೋಟಿಗೆ ಇಳಿಕೆಯಾಗಲಿದೆ. ಹಾಗಾಗಿ ಇಡೀ ದೀಪ ವ್ಯವಸ್ಥೆಯನ್ನು ಎಲ್ಇಡಿಗೆ ಪರಿವರ್ತನೆ ಮಾಡಲಾಗುವುದು ಎಂದು ಹೇಳಿದರು.
ಈ ವ್ಯವಸ್ಥೆ ಕೆಲವು ಮಹಾ ನಗರಗಳಲ್ಲಿ ಜಾರಿಯಲ್ಲಿದೆ ಈಗ ಬೆಂಗಳೂರಿನಲ್ಲೂ ಮಾಡಲು ತೀರ್ಮಾನ ಮಾಡಿದ್ದೇವೆ. ಇಡೀ ನಗರಕ್ಕೆ ಎಲ್ಇಡಿ ಹಾಕಲು 700 ರಿಂದ 800 ಕೋಟಿ ವೆಚ್ಚವಾಗಲಿದೆ. ಈ ಹಣವನ್ನು ಪಾಲಿಕೆ ನೀಡುವುದಿಲ್ಲ. ಖಾಸಗಿ ಸಂಸ್ಥೆಗೆ ವಹಿಸಲಾಗುತ್ತದೆ. ಕೇಂದ್ರ , ರಾಜ್ಯ ಸರ್ಕಾರದ ಅನುದಾನ ಕೂಡಾ ಇರುತ್ತದೆ. ಇಷ್ಟು ಹೆಚ್ಚು ಮೊತ್ತದ ಕಾಮಗಾರಿಯನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ ಕೊಡಲು ಸಾಧ್ಯವಿಲ್ಲ ಎಂದರು.
50 ಲಕ್ಷಕ್ಕೆ ಒಳಪಟ್ಟ ಕಾಮಗಾರಿಗಳನ್ನು ಮಾತ್ರ ಸರ್ಕಾರ ಎಸ್ಸಿ/ ಎಸಿ ಗುತ್ತಿಗೆದಾರರಿಗೆ ನೀಡುವಂತೆ ಆದೇಶಿಸಿದೆ. ಇದು ಕೋಟ್ಯಂತ ರೂ. ಕಾಮಗಾರಿ ಆಗಿರುವುದರಿಂದ ಅವರಿಗೆ ಕೊಡಲಾಗುವುದಿಲ್ಲ. ಇಡೀ ಎಲ್ಇಡಿ ದೀಪ ವ್ಯವಸ್ಥೆಯನ್ನು ಒಂದೇ ಕಡೆ ಕುಳಿತು ನಿರ್ವಹಿಸಬಹುದು. ಪೂರ್ಣ ನಗರಕ್ಕೆ ಅನ್ವಯಿಸಿದ ಯೋಜನೆಯಾಗಿದೆ. ವಲಯಾವಾರು ವಿಭಾಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಎಸ್ಸಿ/ ಎಸ್ಟಿ ಗುತ್ತಿಗೆದಾರರಿಗೆ ಈ ಕಾಮಗಾರಿ ಕೊಡಲು ಸಾಧ್ಯವಿಲ್ಲ. ಮಾ.9ರವರೆಗೆ ಟೆಂಡರ್ ಪ್ರಕ್ರಿಯೆ ಇರುತ್ತದೆ. ಹಾಗಾಗಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂದು ಹೇಳಿದ ಮಂಜುನಾಥ ಪ್ರಸಾದ್ ಇದರಲ್ಲಿ ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.