
ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಚಾಕು ಇರಿತ ಪ್ರಕರಣ ಖಂಡಿಸಿ ಪಾಲಿಕೆ ಮುಂಭಾಗ ಬೃಹತ್ ಪ್ರತಿಭಟನೆ
ಬೆಂಗಳೂರು, ಮಾ.8-ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣ ಖಂಡಿಸಿ ಬಿಬಿಎಂಪಿ ಜೆಡಿಎಸ್ ಸದಸ್ಯರು ಪಾಲಿಕೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಶಾಸಕರಾದ ಕೆ.ಗೋಪಾಲಯ್ಯ, ಟಿ.ಎ.ಶರವಣ, ಜೆಡಿಎಸ್ ಗುಂಪಿನ ನಾಯಕಿ ನೇತ್ರಾನಾರಾಯಣ್ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.
ಈ ವೇಳೆ ಮಾತನಾಡಿದ ಕೆ.ಗೋಪಾಲಯ್ಯ, ಇಡೀ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದಕ್ಕೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಆರೋಪಿಸಿದರು.
ನಮ್ಮ ಪಕ್ಷದ ವರಿಷ್ಠರು ಲೋಕಾಯುಕ್ತರ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಲೋಕಾಯುಕ್ತವನ್ನು ಮುಚ್ಚುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಟಿ.ಎ.ಶರವಣ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಈ ಸರ್ಕಾರಕ್ಕೆ ಆಗಲಿಲ್ಲ. ಲೋಕಾಯುಕ್ತರಿಗೆ ಚಾಕು ಇರಿತ ಪ್ರಕರಣ ಇಡೀ ರಾಜ್ಯಕ್ಕೆ ಕಪ್ಪುಚುಕ್ಕೆ ಇಟ್ಟಂತಾಗಿದೆ. ನ್ಯಾಯಾಧೀಶರಿಗೆ ರಕ್ಷಣೆ ಇಲ್ಲದ ಮೇಲೆ ಜನ ಸಾಮಾನ್ಯರಿಗೆ ಹೇಗೆ ರಕ್ಷಣೆ ಸಿಗುತ್ತದೆ ? ಕಾಂಗ್ರೆಸ್‍ನವರು ಜನ ಸುರಕ್ಷಾ ಯಾತ್ರೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
ಜೆಡಿಎಸ್ ಗುಂಪಿನ ನಾಯಕಿ ನೇತ್ರಾನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ಗೃಹ ಇಲಾಖೆ ವೈಫಲ್ಯ ಕಾರಣ. ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.