ಕಲ್ಪುರ್ಗಿ, ಮಾ.8- ಲೋಕಾಯುಕ್ತರ ಕೊಲೆ ಯತ್ನ ಪ್ರಕರಣ ಸಂಬಂಧ ವಿಪಕ್ಷಗಳ ಟೀಕಾ ಪ್ರಹಾರದ ನಡುವೆ ಸರ್ಕಾರದ ಕಾನೂನು ಸುವ್ಯವಸ್ಥೆ ಬಗ್ಗೆ ಕೆಲ ಲೋಪವಾಗಿರುವುದನ್ನು ಒಪ್ಪಿಕೊಂಡಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ಅದಕ್ಕಾಗಿ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಹತ್ಯೆಗೆ ಯತ್ನ ನಡೆದಿರುವುದು ವಿಷಾದಕರ. ಅಲ್ಲಿನ ಭದ್ರತೆಯಲ್ಲಿ ಲೋಪವಾಗಿದೆ. ಮತ್ತು ಮೆಟಲ್ ಡಿಟೆಕ್ಟರ್ ಕೂಡ ಕೆಲಸ ಮಾಡುತ್ತಿರಲಿಲ್ಲ ಎಂದು ಗೊತ್ತಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇಂತಹ ಘಟನೆಗಳು ಮುಂದೆ ನಡೆಯದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಸದ್ಯದಲ್ಲಿಯೇ ದೆಹಲಿಯ ಸಂಸತ್ ಭವನಕ್ಕೆ ನೀಡಿರುವ ಭದ್ರತೆಯ ಮಾದರಿಯಲ್ಲೇ ಶಸ್ತ್ರ ಸಜ್ಜಿತ ಪಡೆಗಳನ್ನು ನಿಯೋಜಿಸಲು ಚಿಂತನೆ ನಡೆದಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ಸೂಚನೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಲೋಕಾಯುಕ್ತರ ಜತೆ ಬಂಧಿತ ಆರೋಪಿ ಕಳೆದ ಹಲವು ದಿನಗಳ ಹಿಂದೆ ಜಗಳವಾಡಿದ್ದ. ಆಗಲೇ ಭದ್ರತೆ ಬಗ್ಗೆ ತಿಳಿಸಿದ್ದರೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದಾಗಿತ್ತು ಎಂದಿದ್ದಾರೆ.
ವಿರೋಧ ಪಕ್ಷದವರು ರಾಜಕೀಯವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಇದರ ಬಗ್ಗೆ ನಾನೇನು ಹೇಳಲು ಇಚ್ಛಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನನ್ನ ಪುತ್ರಿ ಆಕಾಂಕ್ಷಿ: ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನನ್ನ ಪುತ್ರಿ ಸೌಮ್ಯ ಬಯಸಿರುವುದು ನಿಜ. ಅರ್ಹತೆ ಇದ್ದರೆ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ. ಯುವ ಕಾಂಗ್ರೆಸ್ ಹಾಗೂ ಮಹಿಳಾ ಘಟಕದಲ್ಲಿ ಕೆಲಸ ಮಾಡಿದ್ದಾರೆ. ನನ್ನ ಮಗಳು ಎಂಬುದೇ ಅರ್ಹತಾ ಮಾನದಂಡವಲ್ಲ ಎಂದರು.