ಮೋದಿಗೆ ಬೆದರಿ ಶರಣಾಗತಿಗೆ ಒಪ್ಪಿದನೇ ದಾವೂದ್?

ಹೊಸದಿಲ್ಲಿ: ಮುಂಬೈ ಸರಣಿ ಸ್ಫೋಟದ ರೂವಾರಿ ಹಾಗೂ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಭಾರತ ಸರರ್ಕಾರದ ಮುಂದೆ ಶರಣಾಗಲು ಒಪ್ಪಿದ್ದಾನಂತೆ. ಶರಣಾಗತಿಗೆ ಕೆಲ ಷರತ್ತುಗಳನ್ನು ಹಾಕಿದ್ದಾನೆಯಾದರೂ, ಪ್ರಧಾನಿ ನರೇಂದ್ರ ಮೋದಿಗೆ ಬೆದರಿ ಶರಣಾಗುತ್ತಿದ್ದಾನೆ ಎಂದು ವರದಿಯಾಗಿದೆ. ಇನ್ನು ಇತ್ತೀಚೆಗೆ ಈತನ ಆಪ್ತ ಛೋಟಾ ಶಕೀಲ್ ಹತ್ಯೆಯಾಗಿದ್ದಾನೆ ಎಂದೂ ವರದಿಯಾಗಿತ್ತು.

ಆದರೆ, ದಾವೂದ್ ಇಬ್ರಾಹಿಂಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ(ಐಎಸ್ಐ) ಮೇಲಿನ ಪ್ರಭಾವ ಮುಂದುವರಿದಿದೆ. ಮತ್ತು ಅವನ ದಂಧೆಗಳು ಸಹ ಮುಂದುವರಿದಿವೆ. ಈ ನಡುವೆ ಭಾರತದ ಗುಪ್ತಚರ ದಳಗಳು ಕೂಡ ಆತನ ಮೇಲೆ ತೀವ್ರ ನಿಗಾ ಇರಿಸಿವೆ. ಆದಾಗ್ಯೂ ಸಂಸ್ಥೆ ಐಎಸ್ ಐ ನಿಯಮಿತವಾಗಿ ಆತನ ವಾಸಸ್ಥಳವನ್ನು ಬದಲಿಸುತ್ತಲೇ ಇರುತ್ತದೆ. ಆತನಿಗೆ ಜೀವ ಬೆದರಿಕೆ ಇರುವುದರಿಂದ ಸ್ಥಳ ಬದಲಾವಣೆ ಆಗಿಂದ್ದಾಗೆ ಮಾಡುತ್ತಲೇ ಇರುತ್ತದೆ ಎಂದು ಆತನ ಚಲನವಲನದ ಮೇಲೆ ಕಣ್ಗಾವಲು ಇರಿಸಿರುವ ಗುಪ್ತಚರ ಇಲಾಖೆ ಮೂಲಗಳು ತಿಳಿಸಿದೆ.

ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂಗೆ ಅಲ್ಲಿನ ಸರಕಾರ ಬೆಂಬಲವಾಗಿ ನಿಂತಿದೆ. ಆದ್ದರಿಂದ ಆತನನ್ನು ಭಾರತಕ್ಕೆ ಹಸ್ತಾಂತರ ಮಾಡುವ ಸಾಧ್ಯತೆ ಇಲ್ಲವಾದ್ದರಿಂದ ವ್ಯವಹಾರದ ಮೂಲಕ ಬರುವ ಆದಾಯ ಮೂಲಗಳನ್ನೇ ಕಡಿದು ಹಾಕುವುದು ಭಾರತ ಸರಕಾರದ ಗುರಿ. ಅದರಿಂದ ಯುಎಇ ಸರಕಾರದ ಜತೆಗೆ ಸಂಪರ್ಕದಲ್ಲಿರುವ ಭಾರತವು ಅಲ್ಲಿರುವ ದಾವೂದ್ ಇಬ್ರಾಹಿಂ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಮನವಿ ಮಾಡಿದೆ. ಹಣವಿಲ್ಲದ ದಾವೂದ್ ನನ್ನು ಪಾಕಿಸ್ತಾನ ಕೂಡ ಸಾಕುವುದಿಲ್ಲ. ಆದ್ದರಿಂದಲೇ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

ಇದೇನೆ ಇರಲಿ ದಾವೂದ್ ಶರಣಾಗತಿ ಬಗ್ಗೆ ಕಳೆದ ವರ್ಷ ಮುಂಬೈನಲ್ಲಿ ಬಂಧಿತನಾಗಿದ್ದ ದಾವೂದ್‌ ಇಬ್ರಾಹಿಂನ ಸಹೋದರ ಇಕ್ಬಾಲ್‌ ಕಸ್ಕರ್‌ಪರ ವಾದ ಮಂಡಿಸುತ್ತಿರುವ ವಕೀಲರೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ದಾವೂದ್‌ ಭಾರತಕ್ಕೆ ಹಿಂದಿರುಗಲು ನಿರ್ಧರಿಸಿದ್ದಾನೆ ಎಂದಿರುವ ಕಸ್ಕರ್‌ ಪರ ವಕೀಲರು, ತನ್ನ ಹಿಂದಿರುಗುವಿಕೆ ಕುರಿತಂತೆ ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಅವರ ಬಳಿ ದಾವೂದ್‌ ಹೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಮುಂಬೈ ಬಂದಿಳಿದ ಕೂಡಲೇ ತನ್ನನ್ನು ಪೊಲೀಸರು ಬಂಧಿಸುತ್ತಾರೆಂಬ ಖಚಿತತೆಯೂ ದಾವೂದ್‌ಗೆ ಇದೆ. ಆದರೆ, ಬಂಧನಕ್ಕೆ ತಾನು ಸಿದ್ಧನಿರುವುದಾಗಿ ಹೇಳಿರುವ ದಾವೂದ್‌, ತನ್ನ ಮೇಲೆ ಎಷ್ಟಾದರೂ ಪ್ರಕರಣಗಳನ್ನು ದಾಖಲಿಸಲಿ, ಅವುಗಳನ್ನು ಎದುರಿಸಲು ತಾನು ಸಿದ್ಧ ಎಂದು ತಿಳಿಸಿದ್ದಾನೆ. ಆದರೆ, ಬಂಧಿಸಿದ ಅನಂತರ, ನನ್ನನ್ನು ಮುಂಬಯಿಯ ಆರ್ಥರ್‌ ರಸ್ತೆಯ ಜೈಲಿನಲ್ಲೇ ಇಡಬೇಕು ಎಂಬ ಷರತ್ತನ್ನೂ ಹಾಕಿದ್ದಾನೆ.

ತನ್ನ ಷರತ್ತಿಗೆ ಭಾರತ ಸರಕಾರ ಒಪ್ಪಿಕೊಂಡಲ್ಲಿ ಮಾತ್ರ ತಾನು ಮುಂಬೈಗೆ ಬರುವುದಾಗಿ ಆತ ಸ್ಪಷ್ಟವಾಗಿ ತಿಳಿಸಿದ್ದಾನೆ ಎಂದು ಕಸ್ಕರ್‌ ಪರ ವಕೀಲರು ತಿಳಿಸಿರುವುದಾಗಿ ವರದಿಗಳು ಹೇಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ