
ತೀವ್ರಗೊಂಡ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಕಸರತ್ತು
ಬೆಂಗಳೂರು, ಮಾ.8-ರಾಜ್ಯ ವಿಧಾನಸಭೆಯ ಚುನಾವಣೆ ಕಾವು ತೀವ್ರಗೊಂಡಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಕಸರತ್ತಿಗೆ ಕೈ ಹಾಕಿದೆ.
ಎಐಸಿಸಿ ರಚಿಸಿರುವ ಅಭ್ಯರ್ಥಿಗಳ ಪರಿಶೀಲನಾ ಸಮಿತಿ ಇಂದು ಮತ್ತು ನಾಳೆ ಕೆಪಿಸಿಸಿ ಕಚೇರಿಯಲ್ಲಿ ಕುಳಿತು ಟಿಕೆಟ್ ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸುತ್ತಿದೆ.
ಸಮಿತಿಯ ಅಧ್ಯಕ್ಷರಾದ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಸದಸ್ಯರಾದ ತಮರದ್ವಾಜ್ ಸಾಹು, ಹಾಗೂ ಗೌರವ್ ಗೋಗಾಯ್ ಅವರುಗಳು ಇಂದು ಕೆಪಿಸಿಸಿ ಕಚೇರಿಯಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೂ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ವಿವರ ಪಡೆದರು.
ಟಿಕೆಟ್ ಆಕಾಂಕ್ಷಿಗಳು ಸರತಿ ಸಾಲಿನಲ್ಲಿ ಬಂದು ಸಮಿತಿಯ ಮುಂದೆ ತಮ್ಮ ಮನವಿಗಳನ್ನು ಸಲ್ಲಿಸಿದರು ಕೆಲವು ಹಾಲಿ ಶಾಸಕರೂ ಕೂಡ ಸಮಿತಿಯ ಮುಂದೆ ಹಾಜರಾಗಿ ಈವರೆಗೂ ತಾವು ಮಾಡಿದ ಅಭಿವೃದ್ಧಿ ಕೆಲಸಗಳು, ಪಕ್ಷ ಸಂಘಟನೆ ಮತ್ತು ಜನಪ್ರಿಯತೆಯ ಬಗ್ಗೆ ಮಾಹಿತಿ ನೀಡಿದರು.
ಕಳೆದ ಬಾರಿ ಸ್ಪರ್ಧಿಸಿ ಸೋಲು ಕಂಡವರು ಸ್ಥಳೀಯ ರಾಜಕಾರಣದ ವಿವರಗಳೊಂದಿಗೆ ಮುಂದಿನ ಅವಧಿಯಲ್ಲಿ ಗೆಲ್ಲಬೇಕಾದರೆ ನಮಗೇ ಟಿಕೆಟ್ ನೀಡಬೇಕೆಂದು ಪ್ರತಿಪಾದಿಸಿದರು.
ಹೊಸಬರಂತು ತಮ್ಮ ಬೆಂಬಲಿಗರ ಜತೆ ಬಂದು ಕೆಪಿಸಿಸಿ ಕಚೇರಿ ಮುಂದೆ ಜಯಘೋಷಗಳನ್ನು ಮೊಳಗಿಸಿದರು. ಕ್ಷೇತ್ರದಲ್ಲಿ ತಾವು ಅತ್ಯಂತ ಪ್ರಭಾವಿ ನಾಯಕರಾಗಿದ್ದು, ತಮಗೇ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ನಲ್ಲಿ ಚುನಾವಣೆ ಜ್ವರ ತೀವ್ರಗೊಂಡಿದ್ದು, ಟಿಕೆಟ್ ಆಕಾಂಕ್ಷಿಗಳು ತಮ್ಮ ಹಿರಿಯ ನಾಯಕರ ಮೂಲ ಲಾಬಿ ನಡೆಸುವ ಜತೆಗೆ ಸಮಿತಿಯ ಮುಂದೆಯೂ ತಮ್ಮ ಸಾಮಥ್ರ್ಯ ಪ್ರದರ್ಶನ ಮಾಡುತ್ತಿದ್ದಾರೆ.
ತಿಂಗಳಾಂತ್ಯಕ್ಕೆ ಅಭ್ಯರ್ಥಿಗಳ ಆಯ್ಕೆ ಅಂತಿಮ ಘಟ್ಟಕ್ಕೆ ತಲುಪಲಿದ್ದು, ಮಧುಸೂದನ್ ಮಿಸ್ತ್ರಿ ನೇತೃತ್ವದ ಸಮಿತಿ ಹೈಕಮಾಂಡ್ಗೆ ವರದಿ ನೀಡಲಿದೆ.