ಅಮರಾವತಿ:ಮಾ-8: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ತೆಲುಗು ದೇಶಂ ಪಕ್ಷ ಹಾಗೂ ಬಿಜೆಪಿ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಂಧ್ರ ಸರ್ಕಾರದಲ್ಲಿ ಸಚಿವರಾಗಿದ್ದ ಬಿಜೆಪಿಯ ಇಬ್ಬರು ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಸಚಿವ ಕಮಿನೇನಿ ಶ್ರೀನಿವಾಸ್ ಹಾಗೂ ದತ್ತಿತ ಸಚಿವ ಪೈದಿಕೊಂಡಲ ಮಾಣಿಕ್ಯಲಾ ರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಡ ಹಿನ್ನಲೆಯಲ್ಲಿ ಮೋದಿ ಸಂಪುಟದಲ್ಲಿ ಸಚಿವರಾಗಿರುವ ಅಶೋಕ್ ಗಜಪತಿ ರಾಜು ಮತ್ತು ವೈ.ಎಸ್.ಚೌಧರಿ ತಮ್ಮ ರಾಜೀನಾಮೆ ನೀಡುವಂತೆ ಟಿಡಿಪಿ ಮುಖ್ಯಸ್ಥ, ಸಿಎಂ ಚಂದ್ರಬಾಬು ನಾಯ್ಡು ಸೂಚಿಸಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಬಿಜೆಪಿ ನಾಯಕರು ಕೂಡ ನಾಯ್ಡು ಸಂಪುಟಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನಲಾಗಿತ್ತು.
ಈ ಹಿಂದೆ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಪಿ.ವಿ.ಎನ್. ಮಾಧವ್ ಅವರು, ತೆಲುಗು ದೇಶಂ ಪಕ್ಷದ ಸಚಿವ ಸಂಪುಟದಲ್ಲಿರುವ ನಮ್ಮ ಸಚಿವರು ರಾಜೀನಾಮೆ ನೀಡುತ್ತಾರೆಂದು ಹೇಳಿದ್ದರು. ಆಂಧ್ರಪ್ರದೇಶವನ್ನು ವಿಶೇಷ ರಾಜ್ಯವೆಂದು ನಾವು ಪರಿಗಣಿಸಿದ್ದೇವೆ ಹಾಗೂ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳಿಗೂ ಕೇಂದ್ರ ಸರ್ಕಾರ ಅನುದಾನಗಳನ್ನು ನೀಡುತ್ತಿದೆ. ಟಿಡಿಪಿ ಸಂಪುಟದಿಂದ ನಮ್ಮ ಸಚಿವರು ಹೊರ ಬಂದ ಬಳಿಕ ಕೇಂದ್ರ ಮಾಡಿರುವ ಎಲ್ಲಾ ಕಾರ್ಯಗಳನ್ನು ಜನರಿಗೆ ಮುಟ್ಟಿಸುತ್ತೇವೆ. ಕೇಂದ್ರ ಸರ್ಕಾರ ಆಂಧ್ರಪ್ರದೇಶಕ್ಕೆ ಯಾವುದೇ ರೀತಿಯ ಅನ್ಯಾಯವನ್ನೂ ಮಾಡುತ್ತಿಲ್ಲ ಎಂದು ತಿಳಿಸಿದ್ದರು.
BJP ministers resign, Andhra Pradesh CM Chandrababu Naidu, Cabinet