ಕೊಯಮತ್ತೂರು, ಮಾ.7- ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ, ದಾಂಧಲೆ ಮತ್ತು ಹಿಂಸಾಚಾರಗಳ ಬೆನ್ನಲ್ಲೇ ಕೆಲವು ರಾಜ್ಯಗಳಲ್ಲಿ ಅಹಿತಕರ ಘಟನೆಗಳು ಮರುಕಳಿಸುತ್ತಿವೆ. ತಮಿಳುನಾಡಿನ ಕೊಯಮತ್ತೂರಿನ ಬಿಜೆಪಿ ಕಚೇರಿ ಮೇಲೆ ಇಂದು ಬೆಳಗಿನ ಜಾವ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ಗಳ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಕೊಯಮತ್ತೂರಿನ ಸಿದ್ದಾಪುದರ್ನಲ್ಲಿರುವ ಬಿಜೆಪಿ ಕಚೇರಿ ಬಳಿ ಇಂದು ಮುಂಜಾನೆ 4 ಗಂಟೆಗೆ ಆಟೋರಿಕ್ಷಾದಲ್ಲಿ ಬಂದ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ಗಳನ್ನು ಎಸೆದರು. ಆದರೆ, ಇವು ಕಚೇರಿ ಬಳಿ ಸ್ಫೋಟಗೊಂಡು ಬೆಂಕಿ ಧಗಧಗಿಸಿತು. ಈ ದಾಳಿ ನಡೆಸಿದ ನಂತರ ದುಷ್ಕರ್ಮಿಗಳು ಆಟೋದಲ್ಲಿ ಪರಾರಿಯಾದರು. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಶೇಷ ತಂಡವೊಂದನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ದುಷ್ಕರ್ಮಿಗಳ ಪತ್ತೆಗೆ ಶೋಧ ಮುಂದುವರಿದಿದೆ.
ತ್ರಿಪುರದಲ್ಲಿ ಲೆನಿನ್ ಪ್ರತಿಮೆ ನೆಲಸಮ ಹಾಗೂ ಪೆರಿಯಾರ್ ಎಂದೇ ಪರಿಚಿತರಾದ ಡ್ರಾವಿಡ ನಾಯಕ ಇ.ವಿ.ರಾಮಸ್ವಾಮಿ ಅವರ ಕುರಿತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್.ರಾಜಾ ನೀಡಿರುವ ಹೇಳಿಕೆ ಬೆನ್ನಲ್ಲೇ ಈ ದಾಳಿ ನಡೆದಿದೆ. ಈ ಘಟನೆ ನಂತರ ನಗರದಲ್ಲಿ ವ್ಯಾಪಕ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.