ಶಶಿಕಲಾಗೆ ಯಾವ ರಾಜಾತಿಥ್ಯ ನೀಡುವಂತೆ ಸೂಚನೆ ನೀಡಿಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು, ಮಾ.7- ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾಗೆ ಯಾವ ರಾಜಾತಿಥ್ಯ ನೀಡುವಂತೆ ಸೂಚನೆ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಿಂದ ನಿಯೋಗವೊಂದು ಬಂದು ನನ್ನನ್ನು ಭೇಟಿ ಮಾಡಿ ಶಶಿಕಲಾ ಅವರಿಗೆ ಜೈಲಿನಲ್ಲಿ ಚಾಪೆಯನ್ನು ಕೂಡ ನೀಡುತ್ತಿಲ್ಲ. ಕನಿಷ್ಟ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿತ್ತು. ಅದರಂತೆ ಜೈಲು ಡಿಜಿಪಿ ಅವರನ್ನು ಕರೆದು ಜೈಲಿನ ಮ್ಯಾನುಯಲ್ ಪ್ರಕಾರ ಸಹಾಯ ಮಾಡುವಂತೆ ಸೂಚಿಸಿದ್ದೆ. ಯಾವುದೇ ರಾಜಾತಿಥ್ಯ ನೀಡಲು ಹೇಳಿಲ್ಲ ಎಂದು ಅವರು ತಿಳಿಸಿದರು.
ಬೇಷರತ್ ಸೇರ್ಪಡೆ: ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರು ಬೇಷರತ್ ಆಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿಲ್ಲ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯಸಭೆ ಚುನಾವಣೆಗೆ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿದ್ದೇವೆ. ಹೈಕಮಾಂಡ್ ಸದ್ಯದಲ್ಲೇ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದೆ ಎಂದು ಹೇಳಿದರು.
ಅವರಿಗೆ ಬಿಟ್ಟ ವಿಚಾರ: ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಹಿಂಪಡೆಯುವ ಬಗ್ಗೆ ದೇವೇಗೌಡರು ಪ್ರಸ್ತಾಪ ಮಾಡಿದ್ದಾರೆ ಎಂಬ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಬಿಎಂಪಿಯಲ್ಲಿ ಜೆಡಿಎಸ್ ಜತೆ ಮೈತ್ರಿಯೊಂದಿಗೆ ಆಡಳಿತ ನಡೆಯುತ್ತಿದೆ. ಮುಂದುವರಿಸುವುದು, ಬಿಡುವುದು ಅವರಿಗೇ ಬಿಟ್ಟ ವಿಚಾರ. ರಾಜ್ಯಸಭೆ ಚುನಾವಣೆಗೂ ಇದಕ್ಕೂ ತಾಳೆ ಹಾಕುವುದು ಬೇಡ ಎಂದು ಹೇಳಿದರು.
ಕಲ್ಲಡ್ಕ ಪ್ರಭಾಕರ್ ಶಿಕ್ಷಣ ಸಂಸ್ಥೆಗೆ ಅನುದಾನ ಕಡಿತಗೊಳಿಸಿರುವ ತಾವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಅನುದಾನ ಮುಂದುವರಿಸಿದ್ದೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊಡಬಾರದು ಎಂಬ ನಿಯಮವೆಲ್ಲಿದೆ ಎಂದು ಮರುಪ್ರಶ್ನೆ ಹಾಕಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ